ಈ ಐಎಎಸ್ ಅಧಿಕಾರಿಯ ಮಗನ ಮದುವೆಯ ಖರ್ಚು ಎಷ್ಟೆಂದು ಗೊತ್ತಾದರೆ ನಿಮ್ಮ ತಲೆ ತಿರುಗುವುದು ಖಚಿತ

Update: 2019-02-07 16:28 GMT

ವಿಶಾಖಪಟ್ಟಣ, ಫೆ.7: ಇಂದು ಮದುವೆ ಎಂದರೆ ನಮ್ಮ ಅಂತಸ್ತು ಪ್ರದರ್ಶನಕ್ಕಿರುವ ಅತ್ಯುತ್ತಮ ಅವಕಾಶ ಎಂದೇ ಭಾವಿಸಿಕೊಂಡವರು ಹೆಚ್ಚು. ಆಗರ್ಭ ಶ್ರೀಮಂತರು ಬಿಡಿ, ಮಧ್ಯಮ ವರ್ಗದ ಜನರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡುವುದು ಸರ್ವೇ ಸಾಮಾನ್ಯ. ಇನ್ನು ದೊಡ್ಡ ಹುದ್ದೆಯಲ್ಲಿರುವ ಪ್ರಭಾವಿ ಅಧಿಕಾರಿಯ ಮನೆಯ ಮದುವೆ ಹೇಗಿರಬೇಕು?...

ಆದರೆ ಇಲ್ಲೊಂದು ಹಿರಿಯ ಅಧಿಕಾರಿಯ ಮಗನ ಮದುವೆಯ ವಿಷಯ ಕೇಳಿದರೆ ನಿಮಗೆ ಅಚ್ಚರಿ ಹಾಗು ಸಂತಸ ಖಚಿತ. ಅದೂ ಈ ವ್ಯಕ್ತಿ ಐಎಎಸ್ ಅಧಿಕಾರಿ!. ಆಂಧ್ರ ಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ಪಟ್ನಾಳ ಬಸಂತ್ ಕುಮಾರ್ ಅವರು ತನ್ನ ಮಗನ ಮದುವೆಗೆ ಖರ್ಚು ಮಾಡಿರುವ ಒಟ್ಟು ಮೊತ್ತ 36,000 ರೂಪಾಯಿ ಎಂದರೆ ನೀವು ನಂಬಲೇಬೇಕು.

ಅದೂ ವರ, ವಧು ಇಬ್ಬರ ಕುಟುಂಬ ಸೇರಿ ಮಾಡಲಿರುವ ಖರ್ಚು ಇದು !

ಬಸಂತ್ ಕುಮಾರ್ ಅವರು ವಿಶಾಖಪಟ್ಟಣ ಮೆಟ್ರೋಪಾಲಿಟನ್ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು. ತನ್ನ ಮಗನ ಮದುವೆಯನ್ನು ಅದೆಷ್ಟು ವಿಜೃಂಭಣೆಯಿಂದ ಬೇಕಾದರೂ ಮಾಡಬಹುದಾಗಿದ್ದ ಅವರು ಅತ್ಯಂತ ಸರಳವಾಗಿ, ಅಷ್ಟೇ ಕಡಿಮೆ ಖರ್ಚಿನಲ್ಲಿ ಮಾಡುವ ಮೂಲಕ ಬಹುದೊಡ್ಡ ಸಂದೇಶ ರವಾನಿಸಿದ್ದಾರೆ. ಕೈಯಲ್ಲಿ ಇಲ್ಲದಿದ್ದರೂ ಸಾಲ ಸೋಲ ಮಾಡಿ ಧಾಮ್ ಧೂಮ್ ಮದುವೆ ಮಾಡುವವರಿಗೆ ಒಳ್ಳೆಯ ಪಾಠ ಹೇಳಿದ್ದಾರೆ.

36,000 ರೂಪಾಯಿ ಖರ್ಚನ್ನು ವರ ಹಾಗು ವಧುವಿನ ಕಡೆಯವರು ತಲಾ 18,000 ರೂಪಾಯಿಯಂತೆ ಹಂಚಿಕೊಳ್ಳಲಿದ್ದಾರೆ. ಆಂಧ್ರ ಹಾಗು ತೆಲಂಗಾಣ ರಾಜ್ಯಪಾಲ ಇ ಎಸ್ ಎಲ್ ನರಸಿಂಹನ್ ಅವರು ಮದುವೆಯಲ್ಲಿ ಭಾಗವಹಿಸಲಿದ್ದಾರೆ . 2012 ರಲ್ಲಿ ಐಎಎಸ್ ಗೆ ಬಡ್ತಿ ಪಡೆದ ಬಸಂತ್ ಅವರು ಈ ಹಿಂದೆ ರಾಜ್ಯಪಾಲರ ವಿಶೇಷಾಧಿಕಾರಿ ಹಾಗು ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

2017 ರಲ್ಲಿ ಬಸಂತ್ ಕುಮಾರ್ ತನ್ನ ಪುತ್ರಿಯ ವಿವಾಹವನ್ನು ಕೇವಲ 16,100 ರೂಪಾಯಿ ಖರ್ಚಿನಲ್ಲಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News