ತಂದೆಯನ್ನು ಮರಕ್ಕೆ ಕಟ್ಟಿ ಬಾಲಕಿಯ ಸಾಮೂಹಿಕ ಅತ್ಯಾಚಾರ !

Update: 2019-02-07 17:08 GMT

ಕಿಶನ್‌ಗಂಜ್, ಫೆ. 7: ತಂದೆಯ ಎದುರೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಕಿಶನ್‌ಗಂಜ್‌ನಲ್ಲಿ ಫೆಬ್ರವರಿ 4ರಂದು ನಡೆದಿದೆ. ದುಷ್ಕರ್ಮಿಗಳು ಬಾಲಕಿಯ ತಂದೆಯನ್ನು ಮರಕ್ಕೆ ಕಟ್ಟಿ ಹಾಕಿ, ಅವರ ಎದುರೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವೈದ್ಯಕೀಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೀರು ಕೇಳುವ ನೆಪದಲ್ಲಿ ಆರು ಮಂದಿ ದುಷ್ಕರ್ಮಿಗಳ ತಂಡ ಇವರ ಮನೆಗೆ ಒಳ ನುಗ್ಗಿದೆ. ತಂದೆ ಹಾಗೂ ಮಗಳನ್ನು ಬಲವಂತವಾಗಿ ಮನೆಯಿಂದ ಹೊರಗೆ ಎಳೆದುಕೊಂಡು ಬಂದಿದ್ದಾರೆ. ಅನಂತರ ಗ್ರಾಮದ ಹೊರವಲಯಕ್ಕೆ ಕರೆದು ಕೊಂಡು ಬಂದು ತಂದೆಗೆ ಥಳಿಸಿ ಮರಕ್ಕೆ ಕಟ್ಟಿ ಹಾಕಿದ್ದಾರೆ. ಅನಂತರ ಅವರ ಎದುರೇ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆಶಿಶ್ ಕುಮಾರ್ ತಿಳಿಸಿದ್ದಾರೆ. ಅತ್ಯಾಚಾರ ಎಸಗಿದರೆಂದು ಹೇಳಲಾದ ಆರು ಮಂದಿಯ ಹೆಸರನ್ನು ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇವರಲ್ಲಿ ಓರ್ವನನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News