ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಕ್ಕೆ ಕೇಜ್ರಿವಾಲ್ ಆದೇಶ

Update: 2019-02-07 17:13 GMT

ಹೊಸದಿಲ್ಲಿ,ಫೆ.7: ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆಗಳನ್ನು ಸರಕಾರಿ ಅಭಿಯೋಜಕರು ತಪ್ಪಿಸಿಕೊಳ್ಳುತ್ತಿರುವ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಈ ಪ್ರಾಸಿಕ್ಯೂಟರ್‌ಗಳಿಗೆ ಶೋಕಾಸ್ ನೋಟಿಸ್‌ಗಳನ್ನು ಜಾರಿಗೊಳಿಸುವಂತೆ ಮತ್ತು ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶ ನೀಡಿದ್ದಾರೆ.

2008,ಸೆ.30ರಂದು ನಸುಕಿನ 3:30ರ ಸುಮಾರಿಗೆ ಸೌಮ್ಯಾ ತನ್ನ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ವಸಂತ ಕುಂಜ್‌ನಲ್ಲಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕೊಲೆ ಆರೋಪದಲ್ಲಿ 2009ರಲ್ಲಿ ಐವರನ್ನು ಬಂಧಿಸಲಾಗಿದ್ದು,ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ವಿಚಾರಣೆಯು ಕಳೆದ 10 ವರ್ಷಗಳಿಂದಲೂ ದಿಲ್ಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ ಕುಂಟುತ್ತಲೇ ನಡೆಯುತ್ತಿದೆ.

ವಿಚಾರಣೆಯಲ್ಲಿ ವಿಳಂಬದ ಬಗ್ಗೆ ಅಸಮಾಧಾನಗೊಂಡ ಸೌಮ್ಯಾರ ತಂದೆ ಎಂ.ಕೆ.ವಿಶ್ವನಾಥನ್ ಅವರು ಕೇಜ್ರಿವಾಲ್‌ಗೆ ಪತ್ರವನ್ನು ಬರೆದು ತ್ವರಿತ ವಿಚಾರಣೆ ಮತ್ತು ತಮ್ಮ ಪುತ್ರಿಗೆ ನ್ಯಾಯಕ್ಕಾಗಿ ಕೋರಿದ್ದರು.

ಅಧಿಕಾರಿಗಳ ಪೊಳ್ಳುಭರವಸೆಗಳಿಂದ ತಾವು ರೋಸಿ ಹೋಗಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದ ವಿಶ್ವನಾಥನ್, ಕೇಜ್ರಿವಾಲ್‌ರಿಂದ ದೃಢವಾದ ಕ್ರಮದ ಬಗ್ಗೆ ತಾನು ಆಶಯ ಹೊಂದಿರುವುದಾಗಿ ತಿಳಿಸಿದ್ದರು.

ಸಾರ್ವಜನಿಕ ಅಭಿಯೋಜಕರ ಇತ್ತೀಚಿನ ಬದಲಾವಣೆ ನಮ್ಮ ಕಳವಳಗಳನ್ನು ಇನ್ನಷ್ಟು ಹೆಚ್ಚಿಸಿದೆ. ಅವರೂ ಹಿಂದಿನ ವಿಚಾರಣಾ ದಿನಾಂಕವಾಗಿದ್ದ ಫೆ.2ರಂದು ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರು ಎಂದು ತನ್ನ ಪತ್ರದಲ್ಲಿ ನೋವು ತೋಡಿಕೊಂಡಿದ್ದ ವಿಶ್ವನಾಥನ್,ಪ್ರಕರಣದಲ್ಲಿಯ ಮೊದಲ ಸಾರ್ವಜನಿಕ ಅಭಿಯೋಜಕರನ್ನು ಹೊರತುಪಡಿಸಿದರೆ ಈಗಿನ ಮತ್ತು ಹಿಂದಿನ ಸಾರ್ವಜನಿಕ ಅಭಿಯೋಜಕರು ಪ್ರಕರಣದ ಪ್ರಗತಿಯ ಬಗ್ಗೆ ತನ್ನ ಕುಟುಂಬಕ್ಕೆ ಕಾಲಕಾಲಕ್ಕೆ ಮಾಹಿತಿ ನೀಡದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಮತ್ತು ವಿಚಾರಣೆಗಳಿಗೂ ಹಾಜರಾಗುತ್ತಿಲ್ಲ ಎಂದು ದೂರಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News