×
Ad

ಬಂಧಿತ ವಿದ್ಯಾರ್ಥಿಗಳಿಗೆ ಭಾರತೀಯ-ಅಮೆರಿಕನ್ ಸಂಸದರ ಬೆಂಬಲ

Update: 2019-02-08 20:37 IST

ವಾಶಿಂಗ್ಟನ್, ಫೆ. 8: ನಕಲಿ ವಿಶ್ವವಿದ್ಯಾನಿಲಯ ಹಗರಣಕ್ಕೆ ಸಂಬಂಧಿಸಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಬಂಧನದ ಬಳಿಕ, ಭಾರತೀಯ ರಾಯಭಾರ ಕಚೇರಿಗಳು ಗೊಂದಲದಲ್ಲಿ ಮುಳುಗಿವೆ. ಬಂಧನಕ್ಕೆ ಸಂಬಂಧಿಸಿ ಅಮೆರಿಕ ಸರಕಾರದಿಂದ ಸಕಾಲಿಕ ಅಧಿಕೃತ ಮಾಹಿತಿಗಳ ಕೊರತೆಯ ಹಿನ್ನೆಲೆಯಲ್ಲಿ, ಭಾರತೀಯ ರಾಯಭಾರ ಕಚೇರಿಗಳು ತಮ್ಮ ಸಂಪರ್ಕಗಳನ್ನು ಬಳಸಿ ಬಂಧನಕ್ಕೊಳಗಾದವರ ಮಾಹಿತಿಗಳನ್ನು ಸಂಗ್ರಹಿಸಿವೆ.

ಬಂಧಿತ ವಿದ್ಯಾರ್ಥಿಗಳನ್ನು ಪತ್ತೆಹಚ್ಚುವುದಕ್ಕಾಗಿ ಕಳೆದ ಕೆಲವು ದಿನಗಳಲ್ಲಿ ಭಾರತೀಯ ರಾಜತಾಂತ್ರಿಕರು 30ಕ್ಕೂ ಅಧಿಕ ನಗರಗಳಲ್ಲಿ ಸಂಚರಿಸಿದ್ದಾರೆ. ಈ ಸಂದರ್ಭಗಳಲ್ಲಿ ಅವರು ಜೈಲುಗಳಿಗೆ ಭೇಟಿ ನೀಡಿದ್ದಾರೆ. ಕೆಲವು ಜೈಲುಗಳಲ್ಲಿ ಒಬ್ಬ ವಿದ್ಯಾರ್ಥಿಯಿರಬಹುದು ಎಂದು ನಿರೀಕ್ಷಿಸಿ ಹೋಗಿರುವ ಅವರಿಗೆ ನಾಲ್ಕು, ಐದು ಅಥವಾ ಎಂಟು ವಿದ್ಯಾರ್ಥಿಗಳು ಕಾಣಸಿಕ್ಕಿದ್ದಾರೆ.

ಅದೇ ವೇಳೆ, ಬಂಧಿತ ವಿದ್ಯಾರ್ಥಿಗಳನ್ನು ನ್ಯಾಯೋಚಿತ ರೀತಿಯಲ್ಲಿ ನಡೆಸಿಕೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸುವುದಕ್ಕಾಗಿ ಭಾರತೀಯ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಅಭಿಯಾನವನ್ನೇ ಆರಂಭಿಸಿದ್ದಾರೆ.

ಈ ನಡುವೆ, ಇಬ್ಬರು ಡೆಮಾಕ್ರಟಿಕ್ ಮತ್ತು ಇಬ್ಬರು ರಿಪಬ್ಲಿಕನ್ ಸಂಸದರು ಆಂತರಿಕ ಭದ್ರತಾ ಇಲಾಖೆಗೆ ಜಂಟಿ ಪತ್ರವೊಂದನ್ನು ಬರೆದು, ಬಂಧಿತ ವಿದ್ಯಾರ್ಥಿಗಳನ್ನು ನ್ಯಾಯೋಚಿತವಾಗಿ ನಡೆಸಿಕೊಳ್ಳುವಂತೆ ಹಾಗೂ ಕಾನೂನು ಪ್ರಕಾರ ಲಭ್ಯವಿರುವ ಎಲ್ಲ ಹಕ್ಕುಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.

ಅಕ್ರಮ ವಲಸಿಗರನ್ನು ಪತ್ತೆಹಚ್ಚುವುದಕ್ಕಾಗಿ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯು ಮಿಶಿಗನ್‌ನಲ್ಲಿ ಸ್ಥಾಪಿಸಿದ ನಕಲಿ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದಿರುವ 129 ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕ ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.

ನಕಲಿ ವಿಶ್ವವಿದ್ಯಾನಿಲಯದಲ್ಲಿ ಹಣ ಕೊಟ್ಟು ಹೆಸರು ನೋಂದಾಯಿಸಿ, ವಿದ್ಯಾರ್ಥಿ ವೀಸಾ ಪಡೆದು ಅಮೆರಿಕಕ್ಕೆ ತೆರಳುವ ವಲಸಿಗರು ಬೇರೆ ಕಡೆ ಕೆಲಸ ಮಾಡಿ ಹಣ ಸಂಪಾದಿಸುತ್ತಾರೆ ಎನ್ನುವುದು ಅಮೆರಿಕದ ಅಧಿಕಾರಿಗಳ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News