ಮ್ಯಾನ್ಮಾರ್‌ನಲ್ಲಿ ಮತ್ತೆ ಸಂಘರ್ಷ: ಬಾಂಗ್ಲಾಕ್ಕೆ ಅಲ್ಪಸಂಖ್ಯಾತರ ಪಲಾಯನ

Update: 2019-02-08 15:10 GMT

ಯಾಂಗನ್/ಢಾಕಾ, ಫೆ. 8: ಪಶ್ಚಿಮ ಮ್ಯಾನ್ಮಾರ್‌ನಲ್ಲಿ ಸೇನೆ ಮತ್ತು ರಖೈನ್ ಬುಡಕಟ್ಟು ಬಂಡುಕೋರರ ನಡುವೆ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಸಾವಿರಾರು ಜನಾಂಗೀಯ ಅಲ್ಪಸಂಖ್ಯಾತ ಗ್ರಾಮಸ್ಥರು ಬಾಂಗ್ಲಾದೇಶಕ್ಕೆ ಪಲಾಯನಗೈಯುತ್ತಿದ್ದಾರೆ ಎಂದು ಬಾಂಗ್ಲಾದೇಶ ಗಡಿ ಸೈನಿಕರು ಗುರುವಾರ ಹೇಳಿದ್ದಾರೆ.

ಸೇನಾ ಹೆಲಿಕಾಪ್ಟರ್‌ಗಳಿಂದ ದಾಳಿ ನಡೆಯಬಹುದು ಎಂದು ಹೆದರಿ ನಾವು ಹಳ್ಳಿ ತೊರೆದೆವು ಎಂಬುದಾಗಿ ಮ್ಯಾನ್ಮಾರ್ ತೊರೆದ 38 ಕುಟುಂಬಗಳ ಸದಸ್ಯರು ಹೇಳುತ್ತಾರೆ.

ಮ್ಯಾನ್ಮಾರ್ ಸೇನೆ ಮತ್ತು ಅರಕಾನ್ ಆರ್ಮಿಗೆ ಸೇರಿದ ಬಂಡುಕೋರರ ನಡುವಿನ ಕಾಳಗದ ಹಿನ್ನೆಲೆಯಲ್ಲಿ, ಡಿಸೆಂಬರ್‌ನಿಂದ ರಖೈನ್ ಮತ್ತು ಚಿನ್ ರಾಜ್ಯಗಳ ಹಲವು ಭಾಗಗಳಿಂದ 5,000ಕ್ಕೂ ಅಧಿಕ ಮಂದಿ ಪಲಾಯನಗೈದಿದ್ದಾರೆ.

ರಖೈನ್ ರಾಜ್ಯಕ್ಕೆ ಸ್ವಾಯತ್ತೆ ಬೇಕೆಂದು ಹೋರಾಡುತ್ತಿರುವ ಬಂಡುಕೋರರನ್ನು ನಿಗ್ರಹಿಸಲು ಮ್ಯಾನ್ಮಾರ್ ಸೇನೆ ದೃಢ ನಿರ್ಧಾರ ಮಾಡಿದೆ ಹಾಗೂ ಈ ಪ್ರದೇಶವನ್ನು ತಲುಪದಂತೆ ಹೆಚ್ಚಿನ ನೆರವು ಸಂಸ್ಥೆಗಳನ್ನು ನಿರ್ಬಂಧಿಸಿದೆ.

ಬೌದ್ಧರ ಪ್ರಾಬಲ್ಯದ ರಖೈನ್ ರಾಜ್ಯದಲ್ಲಿ, 2017ರಲ್ಲಿ ಭದ್ರತಾ ಠಾಣೆಗಳ ಮೇಲೆ ಬಂಡುಕೋರರು ದಾಳಿ ನಡೆಸಿದ ಬಳಿಕ, ಮ್ಯಾನ್ಮಾರ್ ಸೇನೆಯು ರೊಹಿಂಗ್ಯಾ ಮುಸ್ಲಿಮರ ಮೇಲೆ ಭೀಕರ ದಮನ ಕಾರ್ಯಾಚರಣೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

ಸೇನೆಯ ಅಮಾನುಷ ಕ್ರೌರ್ಯಕ್ಕೆ ಬೆದರಿ 7.30 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News