ತೇಜಸ್ವಿ ಯಾದವ್ ಗೆ 50 ಸಾವಿರ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

Update: 2019-02-08 16:08 GMT

ಹೊಸದಿಲ್ಲಿ, ಫೆ. 8: ತನ್ನ ಸರಕಾರಿ ಬಂಗಲೆ ಉಳಿಸಿಕೊಳ್ಳಲು ಮನವಿ ಸಲ್ಲಿಸುವ ಮೂಲಕ ನ್ಯಾಯಾಂಗದ ಅತ್ಯಮೂಲ್ಯ ಸಮಯ ವ್ಯರ್ಥ ಮಾಡಿದ ಆರ್‌ ಜೆಡಿ ನಾಯಕ ತೇಜಸ್ವಿ ಯಾದವ್‌ ಗೆ ಸುಪ್ರೀಂ ಕೋರ್ಟ್ ಶುಕ್ರವಾರ 50 ಸಾವಿರ ರೂ. ದಂಡ ವಿಧಿಸಿದೆ.

ಉಪ ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಲಾಗಿದ್ದ ಬಂಗಲೆ ತೆರವುಗೊಳಿಸುವಂತೆ ಬಿಹಾರ್ ಸರಕಾರ ನೀಡಿದ ಆದೇಶದ ವಿರುದ್ಧ ಮನವಿ ಸಲ್ಲಿಸಿದ ಆರ್‌ ಜೆಡಿ ವರಿಷ್ಠ ಲಾಲು ಪ್ರಸಾದ್ ಅವರ ಕಿರಿಯ ಪುತ್ರನನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿದೆ.

ತೇಜಸ್ವಿ ಮನವಿ ಕುರಿತು ಅವರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲು ಎದ್ದು ನಿಲ್ಲುವಂತೆ, "ಏನಿದು ಐಷಾರಾಮಿ ದಾವೆ ?, ನಿಮ್ಮಿಂದ ನ್ಯಾಯಾಲಯದ ಅತ್ಯಮೂಲ್ಯ ಸಮಯ ವ್ಯರ್ಥ್ಯವಾಗುತ್ತಿದೆ" ಎಂದು ಮುಖ್ಯ ನ್ಯಾಯಮೂರ್ತಿ ಅವರು ಹೇಳಿದರು. ಅನಂತರ ಪೀಠ ಅವರ ಮನವಿ ತಿರಸ್ಕರಿಸಿ ತೇಜಸ್ವಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿತು. ತೇಜಸ್ವಿ ಅವರ ಉತ್ತರಾಧಿಕಾರಿ ಸುಶೀಲ್ ಮೋದಿ ವಾಸ್ತವ್ಯವನ್ನು ಬದಲಾಯಿಸಿಕೊಳ್ಳಲು ರಾಜ್ಯ ಸರಕಾರ ಎಸ್ಟೇಟ್ ಅಧಿಕಾರಿ ಮೂಲಕ ನೀಡಿದ ಆದೇಶದ ವಿರುದ್ಧ ತೇಜಸ್ವಿ ಸಲ್ಲಿಸಿದ ಮನವಿಯನ್ನು ಏಕ ಸದಸ್ಯ ಪೀಠ ಹಾಗೂ ವಿಭಾಗೀಯ ಪೀಠ ತಳ್ಳಿ ಹಾಕಿತು. ನೀತೀಶ್ ಕುಮಾರ್ ನೇತೃತ್ವದ ಆಗಿನ ಮಹಾ ಮೈತ್ರಿ ಸರಕಾರದ ಸಂದರ್ಭ ಉಪ ಮುಖ್ಯಮಂತ್ರಿಯಾಗಿ ನಿಯೋಜನೆಯಾದ ಬಳಿಕ 2015ರಲ್ಲಿ ತೇಜಸ್ವಿ ಅವರಿಗೆ ದೇಶ್ರಾಟನ್ ಮಾರ್ಗ್‌ನಲ್ಲಿ ವಿಸ್ತಾರವಾದ ಬಂಗ್ಲೆಯನ್ನು ಮಂಜೂರು ಮಾಡಲಾಗಿತ್ತು.

ರಾಜ್ಯದಲ್ಲಿ ಆರ್‌ ಜೆಡಿ ಅಧಿಕಾರ ಕಳೆದು ಕೊಂಡ ಬಳಿಕ ತೇಜಸ್ವಿ ಆ ಬಂಗ್ಲೆಯಲ್ಲಿ ವಾಸಿಸುವುದನ್ನು ಮುಂದುವರಿಸಿದ್ದರು. ಸರಕಾರದಲ್ಲಿ ಸಚಿವ ಸ್ಥಾನಕ್ಕೆ ಅನುಗುಣವಾಗಿ ದೂರುದಾರರಿಗೆ ಪಾಟ್ನಾದ ಪೋಲೋ ರಸ್ತೆ 1ರಲ್ಲಿ ಬಂಗ್ಲೆ ಮಂಜೂರು ಮಾಡಲಾಗಿತ್ತು. ಬಂಗ್ಲೆ ಹೆಚ್ಚು ಸೂಕ್ತವಾಗಿದೆ ಎಂಬ ಕಾರಣಕ್ಕೆ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಅವರು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ತೇಜಸ್ವಿ ಅವರ ಮನವಿಯ ಕುರಿತು ಆದೇಶ ನೀಡಿದ ಪಾಟ್ನಾ ಹೈಕೋರ್ಟ್ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News