ಉದ್ಯೋಗ ವರದಿ ಬಿಡುಗಡೆಗೆ ಸರಕಾರದ ವಿಳಂಬ ರಾಜೀನಾಮೆಗೆ ಕಾರಣ: ಸಾಂಖ್ಯಿಕ ಆಯೋಗದ ಮಾಜಿ ಮುಖ್ಯಸ್ಥ ಮೋಹನನ್

Update: 2019-02-08 17:14 GMT

ಹೊಸದಿಲ್ಲಿ,ಫೆ.8: ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ ಸಿದ್ಧಪಡಿಸಿದ್ದ ಉದ್ಯೋಗ ವರದಿಯನ್ನು ಬಿಡುಗಡೆ ಮಾಡಲು ಸರಕಾರ ವಿಳಂಬ ಮಾಡಿದ್ದೇ ಹುದ್ದೆಗೆ ರಾಜೀನಾಮೆ ನೀಡಲು ಮುಖ್ಯ ಕಾರಣವಾಗಿದೆ ಎಂದು ಭಾರತದ ಸಾಂಖ್ಯಿಕ ಆಯೋಗದ ಮಾಜಿ ಮುಖ್ಯಸ್ಥ ಪಿ.ಸಿ ಮೋಹನನ್ ಎನ್‌ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೋಹನನ್ ಜನವರಿ 28ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದು ಕರಡು ವರದಿ ಎಂಬ ಸರಕಾರದ ಹೇಳಿಕೆ ಸರಿಯಲ್ಲ. ಒಮ್ಮೆ ಆಯೋಗ ಅಂಗೀಕರಿಸಿದರೆ ನಂತರ ಅದು ಅಂತಿಮ ವರದಿ ಎಂದು ಪರಿಗಣಿಸಲ್ಪಡುತ್ತದೆ. ಅದನ್ನು ಪುನಃ ಸರಕಾರ ಅಂಗೀಕರಿಸಬೇಕು ಎಂದು ನೀವು ಹೇಳುವಂತಿಲ್ಲ. ಅಂಗೀಕಾರ ಎಂಬ ಶಬ್ಧ ಬಳಸಿದಾಗ ಅಲ್ಲಿ ವಿಶ್ವಾಸಾರ್ಹತೆಯ ಪ್ರಶ್ನೆ ಉದ್ಭವವಾಗುತ್ತದೆ ಎಂದು ಮೋಹನನ್ ಅಭಿಪ್ರಾಯಿಸಿದ್ದಾರೆ. ಲೋಕಸಭೆ ಚುನಾವಣೆಗೆ ತಿಂಗಳುಗಳಷ್ಟೇ ಬಾಕಿಯಿರುವ ವೇಳೆ ಬಿಡುಗಡೆಯಾಗಿರುವ ಉದ್ಯೋಗ ವರದಿಯಲ್ಲಿ ದೇಶದಲ್ಲಿ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ ಉಂಟಾಗಿದೆ ಎಂದು ತಿಳಿಸಲಾಗಿದೆ.

ಈ ವರದಿ ಸಾಕಷ್ಟು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಈ ವರದಿಯನ್ನು ಸರಕಾರ ಬಿಡುಗಡೆ ಮಾಡದೆ ಹೋದರೂ ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆ ಅದನ್ನು ಬಹಿರಂಗಪಡಿಸಿತ್ತು. ನೀತಿ ಆಯೋಗ ಈ ವರದಿಯನ್ನು ಕರಡು ಎಂದು ತಿಳಿಸಿದ್ದು ಅಂತಿಮಗೊಳ್ಳಲು ಬಾಕಿಯಿದೆ ಎಂದು ಹೇಳಿಕೆ ನೀಡಿತ್ತು. ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿರುವಂತೆ ವೈಯಕ್ತಿಕ ಕಾರಣದಿಂದ ತಾನು ಹುದ್ದೆಗೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಮೋಹನನ್, ಆಯೋಗದಲ್ಲಿ ಮುಂದುವರಿಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾಕೆಂದರೆ ಆಯೋಗವು ಅಷ್ಟೊಂದು ಪರಿಣಾಮಕಾರಿಯಾಗಿ ಉಳಿದಿಲ್ಲ ಎಂದು ನಾನು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News