ನಾಪತ್ತೆಯಾದ ಕಾಶ್ಮೀರಿ ಸೈನಿಕನ ಸಹೋದರನಿಗೆ ಸೇನಾ ಶಿಬಿರದಲ್ಲಿ ಗಂಭೀರ ಹಲ್ಲೆ, ಚಿತ್ರಹಿಂಸೆ

Update: 2019-02-08 17:22 GMT

ನಾಪತ್ತೆಯಾಗಿರುವ ಕಾಶ್ಮೀರಿ ಸೈನಿಕನೊಬ್ಬನ ಸಹೋದರನಿಗೆ ಸೇನಾ ಶಿಬಿರದಲ್ಲಿ ಅಮಾನವೀಯ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ವಿಚಾರ ಕಣಿವೆ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ thewire.in ವಿಶೇಷ ವರದಿ ಪ್ರಕಟಿಸಿದ್ದು, ವರದಿಯ ಪೂರ್ಣಪಾಠ ಈ ಕೆಳಗಿದೆ.

ತೌಸೀಫ್ ಅಹ್ಮದ್ ವಾನಿಯವರ ಫೋನ್ ಫೆಬ್ರವರಿ 4ರಂದು ಸಂಜೆ ರಿಂಗಣಿಸಿದಾಗ ಅವರು ಮನೆಯಲ್ಲಿದ್ದರು. "ತಕ್ಷಣ ಸೇನಾ ಶಿಬಿರಕ್ಕೆ ಹಾಜರಾಗಿ" ಎಂದು ಪುಲ್ವಾನಾದ ಶಾದಿಮಾರ್ಗ್ ಗ್ರಾಮದಲ್ಲಿರುವ ಭಾರತೀಯ ಸೇನೆಯ 44-ಆರ್‍ಆರ್ ಘಟಕದಿಂದ ಬಂದ ಕರೆ ಸಂದೇಶ ನೀಡಿತ್ತು.

ಕುಟುಂಬಕ್ಕೂ ಏನೂ ಹೇಳದೇ ವಾನಿ ತಮ್ಮ ಮನೆಯಿಂದ ಸ್ವಂತ ಕಾರಿನಲ್ಲಿ ಸೇನಾ ಶಿಬಿರದತ್ತ ಧಾವಿಸಿದರು. ಅರ್ಧ ಗಂಟೆ ಬಳಿಕ ಅಂದರೆ ಮಧ್ಯಾಹ್ನ 2 ಗಂಟೆ ಸುಮಾರಿಗೆ 27 ವರ್ಷದ ವಾನಿ ಸೇನಾ ಶಿಬಿರದ ಪ್ರವೇಶ ದ್ವಾರದ ಬಳಿ ಇದ್ದರು.

"ನಾನು ಒಳ ಪ್ರವೇಶಿಸಿದ ಘಳಿಗೆಯಲ್ಲೇ ನರಕ ದರ್ಶನವಾಯಿತು. ನನ್ನನ್ನು ಮೇಜರ್ ರೋಹಿತ್ ಶುಕ್ಲಾ ಮುಂದೆ ಹಾಜರುಪಡಿಸಲಾಯಿತು. ಅವರು ನನ್ನ ಕೆನ್ನೆಗೆ ಹೊಡೆದು ಶಿಬಿರದ ಮತ್ತೊಂದು ಮೂಲೆಗೆ ನನ್ನನ್ನು ಕರೆದೊಯ್ಯುವಂತೆ ತಮ್ಮ ಸಹಾಯಕರಿಗೆ ಸೂಚಿಸಿದರು" ಎಂದು ವಾನಿ  thewire.inಗೆ ವಿವರಿಸಿದರು.

"ಬಳಿಕ ಮೇಜರ್ ಮುಂದೆ ಹಾಜರುಪಡಿಸುವ ಮುನ್ನ ನಾಲ್ಕು ಮಂದಿ ಸೇನಾ ಸಿಬ್ಬಂದಿಯ ಒಂದು ಗುಂಪು ನನ್ನನ್ನು ಥಳಿಸಲಾರಂಭಿಸಿತು. ಶುಕ್ಲಾ ಅವರು ನನ್ನ ಹೆಗಲಿಗೆ ಬಂದೂಕು ನೇತು ಹಾಕಿಕೊಳ್ಳುವಂತೆ ಸೂಚಿಸಿ ಫೋಟೊಗೆ ಫೋಸ್ ನೀಡುವಂತೆ ಆದೇಶಿಸಿದರು. ಇದಕ್ಕೆ ನಾನು ಪ್ರತಿರೋಧ ವ್ಯಕ್ತಪಡಿಸಿದಾಗ ಸೇನಾ ಸಿಬ್ಬಂದಿ ಮತ್ತೆ ನನಗೆ ಹೊಡೆದರು. ಬಳಿಕ ನನ್ನ ಎಲ್ಲ ಬಟ್ಟೆ ಬಿಚ್ಚುವಂತೆ ಸೂಚಿಸಲಾಯಿತು. ನಾನು ನಗ್ನವಾಗಿ ನಿಂತಿದ್ದೆ. ನನ್ನ ಹೆಗಲಿಗೆ ಬಂದೂಕು ತೂಗು ಹಾಕಿಕೊಂಡಿರುವ ಚಿತ್ರವನ್ನು ಎರಡು ದಿನಗಳ ಒಳಗಾಗಿ ನನ್ನ ಫೇಸ್‍ ಬುಕ್ ಪೇಜ್‍ನಲ್ಲಿ ಪೋಸ್ಟ್ ಮಾಡದಿದ್ದರೆ, ಎನ್‍ಕೌಂಟರ್‍ನಲ್ಲಿ ನನ್ನನ್ನು ಕೊಲ್ಲುವುದಾಗಿ ಮೇಜರ್ ಎಚ್ಚರಿಸಿದರು. ನನಗೆ ತೀರಾ ಭಯವಾಯಿತು ಹಾಗೂ ನನ್ನನ್ನು ಇಲ್ಲಿಂದ ಬಿಟ್ಟರೆ ಸಾಕು ಎಂಬ ಯೋಚನೆ ಬಂತು" ಎಂದು ವಾನಿ ನೆನಪಿಸಿಕೊಳ್ಳುತ್ತಾರೆ.

ಕಥೆ ಇಲ್ಲಿಗೆ ಮುಗಿಯಲಿಲ್ಲ. "ಮರು ಕ್ಷಣವೇ ನನ್ನ ಕೈ ಮತ್ತು ಕಾಲನ್ನು ಶಿಬಿರದ ಒಳಗೆ ಇದ್ದ ಮರಕ್ಕೆ ಕಟ್ಟಲಾಯಿತು. ಸುಮಾರು ಅರ್ಧ ಗಂಟೆ ಕಾಲ ಅಂದರೆ ನಾನು ಪ್ರಜ್ಞೆ ತಪ್ಪಿ ಬೀಳುವವರೆಗೆ ಸೇನಾ ಸಿಬ್ಬಂದಿ ನನ್ನನ್ನು ಮನಸೋ ಇಚ್ಛೆ ಥಳಿಸಿದರು" ಎಂದು ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಲ್ಲಿ ನೋವಿನಿಂದ ನರಳುತ್ತಾ ಬೆಡ್ ಮೇಲೆ ಬಿದ್ದಿರುವ ವಾನಿ ಭಯಾನಕ ಘಟನೆಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಅವರ ಬೆನ್ನು ಹಾಗೂ ಕಾಲುಗಳಲ್ಲಿ ಗಾಯ ಹಾಗೂ ಬಾಸುಂಡೆಗಳು ಕಾಣುತ್ತಿವೆ. "ಶಿಬಿರದ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನನ್ನನ್ನು ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಶ್ರೀನಗರಕ್ಕೆ ನನ್ನನ್ನು ಸಾಗಿಸಲಾಯಿತು" ಎಂದು ಹೇಳಿದರು.

ವಾನಿಯವರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ವಿವರಿಸಿದರು. "ತೀರಾ ಅಮಾನುಷವಾಗಿ ಅವರನ್ನು ಥಳಿಸಲಾಗಿದ್ದು, ಅವರ ಮೆದು ಅಂಗಾಂಶಗಳಿಗೆ ತೀವ್ರತರ ಗಾಯಗಳಾಗಿವೆ. ಅವರ ಆಂತರಿಕ ಅಂಗಾಂಗಳಿಗೆ ಯಾವುದೇ ತೀವ್ರತರ ಗಾಯಗಳಾಗಿವೆಯೇ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ" ಎಂದವರು ಹೇಳುತ್ತಾರೆ.

ವಾನಿಯವರ ಸ್ಥಿತಿ ಇಡೀ ಕಣಿವೆ ಪ್ರದೇಶದಲ್ಲಿ ಸಿಟ್ಟು ಕಟ್ಟೆಯೊಡೆಯಲು ಕಾರಣವಾಗಿದೆ. "ಹೀಗೆ ನಮ್ಮ ಯುವಕರಿಗೆ ಹೊಡೆದು, ಚಿತ್ರಹಿಂಸೆ ನೀಡಲಾಗುತ್ತಿದೆ ಹಾಗೂ ನಾವು ಬಂದೂಕು ಕೈಗೆತ್ತಿಕೊಳ್ಳುವಂತೆ ಮಾಡಲಾಗುತ್ತಿದೆ. ಆತ ಏನು ಮಾಡಿದ್ದ?, ಆತ ಮಾಡಿದ ಅಪರಾಧವಾದರೂ ಏನು? ಎಂದು ಆಸ್ಪತ್ರೆಯ ವಾರ್ಡ್ ಸಂಖ್ಯೆ 19ರಲ್ಲಿ ವಾನಿ ಜತೆಗೆ ಇರುವ ಸೋದರ ಸಂಬಂಧಿ ಪ್ರಶ್ನಿಸುತ್ತಾರೆ.

ವಾನಿ ಸ್ಥಿತಿ ವಾರ್ಡ್‍ನಲ್ಲಿರುವ ಸಹಾಯಕರಿಗೆ ಕೂಡಾ ಆಘಾತ ತಂದಿದೆ. "ಅವರ ಜರ್ಜರಿತ ದೇಹವನ್ನು ನೋಡಿ. ಆತನನ್ನು ಹೇಗೆ ಅಮಾನುಷವಾಗಿ ಥಳಿಸಲಾಗಿದೆ ಎಂದು ಕಲ್ಪಿಸಿಕೊಳ್ಳುವುದೂ ಅಸಾಧ್ಯ" ಎಂದು ಸಹಾಯಕನಾಗಿರುವ ನಜೀಬ್ ಅಹ್ಮದ್ ಹೇಳುತ್ತಾರೆ.

"ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೂ ಇದಕ್ಕೆ ಕೊನೆ ಇಲ್ಲ. ಇವರದ್ದು ಮೊದಲ ಪ್ರಕರಣವೇನೂ ಅಲ್ಲ. ಕೊನೆಯೂ ಅಲ್ಲ. ಈ ಅಸಹಾಯಕ ಕಾಶ್ಮೀರಿಗಳ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ" ಎಂದು ವಾನಿ ಪಕ್ಕದ ರೋಗಿಯ ಜತೆಗಿದ್ದ ಮಹಿಳೆ ಪ್ರಶ್ನಿಸಿದರು.

ವಾನಿ ಯಾರು?

ಪುಲ್ವಾನಾದ ಸೇಬು ಬೆಳೆಯುವ ರೈತರ ಕುಟುಂಬಕ್ಕೆ ಸೇರಿದ ವಾನಿ ಇಂಗ್ಲಿಷ್‍ ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಗುತ್ತಿಗೆದಾರರಾಗಿದ್ದ ಅವರ ತಂದೆಯನ್ನು 2002ರಲ್ಲಿ ಉಗ್ರರು ಅಪಹರಿಸಿದ್ದು, ಆ ಬಳಿಕ ಅವರು ನಾಪತ್ತೆಯಾಗಿದ್ದಾರೆ ಎಂದು ವಾನಿ ಹೇಳುತ್ತಾರೆ.

ವಾನಿಯವರ ತಮ್ಮ ಅಬಿತ್ ಹುಸೇನ್, ಕಳೆದ ವರ್ಷದ ಜೂನ್‍ನಲ್ಲಿ ಪುಲ್ವಾನಾದಲ್ಲಿ ಮತ್ತೊಬ್ಬ ಸೈನಿಕ ಔರಂಗಜೇಬ್‍ನನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿದ ಬಳಿಕ ನಾಪತ್ತೆಯಾಗಿದ್ದಾರೆ.

ಔರಂಗಜೇಬ್ ಅವರಿಗೆ ಈ ವರ್ಷದ ಗಣರಾಜ್ಯೋತ್ಸವ ದಿನದಂದು ಅಶೋಕ ಚಕ್ರವನ್ನು ಮರಣೋತ್ತರವಾಗಿ ಪ್ರದಾನ ಮಾಡಿ ಗೌರವ ಸಲ್ಲಿಸಲಾಗಿತ್ತು. ರಜೆ ನಿಮಿತ್ತ ಪೂಂಚ್‍ ನಲ್ಲಿರುವ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದಾಗ, ಉಗ್ರರು ಅವರನ್ನು ಸಾರ್ವಜನಿಕ ಸಾರಿಗೆ ವಾಹನದಿಂದ ಅಪಹರಿಸಿದ್ದರು. ಜೂನ್ 14ರಂದು ಸಂಜೆ ಗುಸ್ಸು ಗ್ರಾಮದಲ್ಲಿ ಗುಂಡಿನಿಂದ ಜರ್ಜರಿತವಾಗಿದ್ದ ಅವರ ಮೃತದೇಹ ಪತ್ತೆಯಾಗಿತ್ತು. ಇವರನ್ನು ಸೇನೆಯ 44-ಆರ್‍ಆರ್ ಶಿಬಿರದಲ್ಲಿ ನಿಯೋಜಿಸಲಾಗಿತ್ತು.

"ಅಮಾಯಕರನ್ನು ಹೊಡೆಯುವುದು ಶೌರ್ಯವಲ್ಲ"

ಮಂಗಳವಾರ ತಡರಾತ್ರಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆಸ್ಪತ್ರೆಗೆ ಭೇಟಿ ನೀಡಿ ವಾನಿಯವರನ್ನು ಭೇಟಿ ಮಾಡಿದ್ದರು.

ಯುವಕನನ್ನು ಹೊಡೆದ ಕ್ರಮವನ್ನು ಕಟುವಾಗಿ ಟೀಕಿಸಿದ ಅವರು, "ಬಂದೂಕು ತಗುಲಿ ಹಾಕಿಕೊಂಡ ಫೋಟೊ ಅಪ್‍ಲೋಡ್ ಮಾಡದಿದ್ದರೆ ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡುವುದಾಗಿ ವಾನಿಗೆ ಮೇಜರ್ ಶುಕ್ಲಾ ಬೆದರಿಕೆ ಹಾಕಿದ್ದಾರೆ ಮತ್ತು ಅಮಾನುಷವಾಗಿ ಥಳಿಸಿದ್ದಾರೆ" ಎಂದು ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದ್ದರು.

"ಮೇಜರ್ ಶುಕ್ಲಾ ಧೈರ್ಯದ ಅಧಿಕಾರಿ, ಸಾಹಸಿ ಎಂದು ನಾನು ಕೇಳಿದ್ದೆ. ಆದರೆ ಅಮಾಯಕರಿಗೆ ಕಿರುಕುಳ ನೀಡಿ ಹೊಡೆಯುವುದು ಯಾವ ಶೌರ್ಯ?, ಸೇನಾ ಶಿಬಿರಕ್ಕೆ ಯುವಕನನ್ನು ಕರೆಸಿಕೊಳ್ಳುವುದರಲ್ಲಿ ಮತ್ತು ಹೀಗೆ ಅಮಾನುಷವಾಗಿ ಹಲ್ಲೆ ಮಾಡುವುದಲ್ಲಿ ಯಾವ ಶೌರ್ಯವೂ ಇಲ್ಲ" ಎಂದು ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಾದಕರ ಘಟನೆಯ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅವರು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ಆಗ್ರಹಿಸಿದ್ದಾರೆ.

"ಈ ಕೃತ್ಯಗಳ ಬಗ್ಗೆ ಸೇನೆಯ ಮೇಜರ್ ಅವರಿಂದ ಸ್ಪಷ್ಟನೆ ಕೇಳಬೇಕು. ವಾನಿಯವರಿಗೆ ಶಿಬಿರಕ್ಕೆ ಬರುವಂತೆ ಏಕೆ ಸಮನ್ಸ್ ನೀಡಲಾಗಿತ್ತು ಹಾಗೂ ಬಹುತೇಕ ಸಾಯುವತನಕ ಏಕೆ ಹೊಡೆಯಲಾಯಿತು?, ಇಲ್ಲಿ ಹಿರಿಯ ಸೇನಾ ಅಧಿಕಾರಿಗಳ ಜತೆಯೂ ಈ ವಿಷಯದ ಬಗ್ಗೆ ಚರ್ಚಿಸುತ್ತೇನೆ" ಎಂದು ಮೆಹಬೂಬಾ ಹೇಳಿದರು.

ಇತ್ತೀಚೆಗೆ ಐಎಎಸ್ ತೊರೆದು ರಾಜಕೀಯ ಸೇರಲು ಮುಂದಾಗಿರುವ ಶಾ ಫೈಝಲ್ ಕೂಡಾ ಸೇನಾ ಅಧಿಕಾರಿಯ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.

ಸಹೋದರ ನಾಪತ್ತೆ

ಜಮ್ಮು ಮತ್ತು ಕಾಶ್ಮೀರದ ಲಘು ಪದಾತಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಮ್ಮ ಅಬೀದ್‍ ಹುಸೈನ್, ಉಗ್ರಗಾಮಿಗಳು ಔರಂಗಜೇಬ್‍ನನ್ನು ಹತ್ಯೆ ಮಾಡಿದಾಗ ರಜೆ ಮೇಲೆ ಮನೆಗೆ ಬರುತ್ತಿದ್ದ. "ಅದೇ ದಿನ ಅಬೀದ್‍ ನನ್ನು ಶಾದಿಮಾರ್ಗ್ ಶಿಬಿರಕ್ಕೆ ಹಿಂದಿರುಗುವಂತೆ ಕರೆಸಿಕೊಳ್ಳಲಾಗಿತ್ತು. ಆ ಬಳಿಕ ಅವನನ್ನು ಜೆಎಕೆಎಲ್‍ಐನ ಹೈದರಾಬಾದ್ ಘಟಕಕ್ಕೆ ವರ್ಗಾಯಿಸಲಾಯಿತು" ಎಂದು ವಾನಿ ವಿವರಿಸಿದರು.

ಕೆಲ ದಿನಗಳ ಕಾಲ ಅವರ ಕುಟುಂಬ ಹುಸೈನ್ ಅವರ ಸಂಪರ್ಕದಲ್ಲಿತ್ತು. ಆದರೆ ಆ ಬಳಿಕ ಸಂಪರ್ಕ ಕಡಿತಗೊಂಡಿತು. "ಕೊನೆಯ ಬಾರಿ ಕಳೆದ ಜುಲೈನಲ್ಲಿ ತಮ್ಮನೊಂದಿಗೆ ನಾನು ಮಾತನಾಡಿದ್ದೆ. ಆಗ ತಾನು ಹೈದರಾಬಾದ್‍ ನಲ್ಲಿ ಇರುವುದಾಗಿಯೂ, ಎಲ್ಲವೂ ಚೆನ್ನಾಗಿದೆ ಎಂದು ಆತ ಹೇಳಿದ್ದ" ಎಂದು ವಾನಿ ನೆನಪಿಸಿಕೊಳ್ಳುತ್ತಾರೆ.

"ಜುಲೈ 14ರ ಬಳಿಕ ಹುಸೈನ್ ಮೊಬೈಲ್ ಸ್ವಿಚ್ ಆಫ್ ಆಗಿದೆ. ಪೊಲೀಸ್ ಅಧೀಕ್ಷಕ ಸೇರಿದಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳ ಬಳಿ ಈ ಬಗ್ಗೆ ದೂರು ನೀಡಿದ್ದೆವು. ಬಹುಶಃ ಇದು ಆಂತರಿಕ ವಿಚಾರವಾದ್ದರಿಂದ ದೂರನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂಬ ಉತ್ತರ ಬಂತು" ಎಂದು ವಾನಿ ವಿವರ ನೀಡಿದರು.

ಜನವರಿ 28ರಂದು ವಾನಿಗೆ ಅನಾಮಧೇಯ ಸಂಖ್ಯೆಯೊಂದರಿಂದ ಕರೆ ಬಂದಿತ್ತು. "ಆಗ ಹುಸೈನ್ ಮಾತನಾಡಿದ್ದ. ಸುಮಾರು ಎರಡು ನಿಮಿಷ ಕಾಲ ನಾವು ಮಾತನಾಡಿದೆವು. ನಮ್ಮ ತಾಯಿ ಹಾಗೂ ಸಹೋದರಿ ಜತೆಗೂ ಮಾತನಾಡಿದ. ತಾನು ಚೆನ್ನಾಗಿದ್ದೇನೆ ಎಂದು ಹೇಳಿದ. ತಕ್ಷಣ ಕರೆ ಕಡಿತಗೊಂಡಿತು. ಆದರೆ ಕಾಶ್ಮೀರಿ ಭಾಷೆಯಲ್ಲಿ ನನ್ನೊಂದಿಗೆ ಮಾತನಾಡಲು ಅವಕಾಶ ನೀಡಿರಲಿಲ್ಲ" ಎಂದು ಅಹ್ಮದ್ ಹೇಳಿದರು.

ಈ ಘಟನೆಯ ಬಗ್ಗೆ ಸೇನೆಯ ಪ್ರತಿಕ್ರಿಯೆ ಕೇಳುವ ಸಲುವಾಗಿ ‘ದ ವೈರ್‍ನಿಂದ ಪದೇ ಪದೇ ಮಾಡಿದ ಕರೆ ಹಾಗೂ ಸಂದೇಶಗಳಿಗೆ ರಕ್ಷಣಾ ವಕ್ತಾರರು ಪ್ರತಿಕ್ರಿಯಿಸಿಲ್ಲ.

Writer - ಮುದಸಿರ್ ಅಹ್ಮದ್, thewire.in

contributor

Editor - ಮುದಸಿರ್ ಅಹ್ಮದ್, thewire.in

contributor

Similar News