ಡಾ. ಬಿ.ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರಿಗೆ ಬಿಸಿಸಿಐ "ಜೀವಮಾನ ಸಾಧನಾ ಪ್ರಶಸ್ತಿ"

Update: 2019-02-09 08:19 GMT

ಬಂಟ್ವಾಳ, ಫೆ. 9: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಆರಂಭಗೊಂಡ "ಬ್ಯಾರಿ ಮೇಳ-2019" ಕಾರ್ಯಕ್ರಮದಲ್ಲಿ ಬಿ.ಎ. ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ಬಿ.ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರಿಗೆ ಬಿಸಿಸಿಐ "ಜೀವಮಾನ ಸಾಧನಾ ಪ್ರಶಸ್ತಿ" ಪ್ರದಾನಿಸಿ ಗೌರವಿಸಲಾಯಿತು.

ಡಾ. ಬಿ. ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ಕುರಿತ ಕಿರುಪರಿಚಯ:

ಡಾ. ಬಿ.ಅಹ್ಮದ್ ಹಾಜಿ ಅವರು 1933ರ ಜೂನ್ 18ರಂದು ಮಂಗಳೂರಿನ ಬಂದರಿನಲ್ಲಿ ಹಾಜಿ ಮುಹಿಯುದ್ದೀನ್ ಚೆಯ್ಯಬ್ಬ ಹಾಗೂ ಮರಿಯಮ್ಮರ ಸುಪುತ್ರನಾಗಿ ಜನಿಸಿದರು.

ಮಂಗಳೂರಿನ ಬದ್ರಿಯಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಗಣಪತಿ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಹಾಗೂ ಮಂಗಳೂರು ಸರಕಾರಿ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು.

ಯಶಸ್ವಿ ಉದ್ಯಮಿಯಾಗಿ:

ಮಂಗಳೂರಿನ ಖ್ಯಾತ ಉದ್ಯಮಿ ಯೆನೆಪೋಯ ಮೊಯ್ದಿನ್ ಕುಂಞಿ ಅವರ ಮೊದಲ ಪುತ್ರಿ ಬಿಫಾತಿಮಾ ಅವರನ್ನು ಮದುವೆಯಾದ ಇವರು, 1964ರಲ್ಲಿ ಮಂಗಳೂರಿನಿಂದ 20 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿಯ ಅಲ್ಪದೂರದಲ್ಲಿ ಮರದ ಉದ್ಯಮವನ್ನು ಆರಂಭಿಸಿದರು.

1970ರಲ್ಲಿ ಮಿಲ್ಲಿನ ವಿಸ್ತರಣೆ, 1975ರಲ್ಲಿ ಫಾತಿಮಾ ಟಿಂಬರ್ಸ್‌, 1978ರಲ್ಲಿ ಹಾಜಿ ಟಿಂಬರ್ಸ್ ಕಾಂಪ್ಲೆಕ್ಸ್, 1984ರಲ್ಲಿ ಹಾಜಿ ಟಿಂಬರ್ಸ್‌ ಇಂಡಸ್ಟ್ರಿಸ್, 1986ರಲ್ಲಿ ಮರವನ್ನು ಆಮದು ಮಾಡಿ ಬಿ.ಎ. ಶಿಫ್ಟಿಂಗನ್ನು ಸ್ಥಾಪಿಸಿದರು. ಅತ್ಯಂತ ಶ್ರಮವಹಿಸಿ ಮರದ ಉದ್ಯಮವನ್ನು ಅಭಿವೃದ್ಧಿಪಡಿಸಿ ವ್ಯವಹಾರದ ಒಂದೊಂದೇ ಮೆಟ್ಟಿಲು ಮೆಲೇರಿದರು.

ಶೈಕ್ಷಣಿಕ ರಂಗ: 

1988ರಲ್ಲಿ ತುಂಬೆಯಲ್ಲಿ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿ, 1988ರಲ್ಲೇ ತುಂಬೆ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಆರಂಭದಲ್ಲಿ 12 ವಿದ್ಯಾರ್ಥಿಗಳು ಹಾಗೂ ಇಬ್ಬರು ಅಧ್ಯಾಪಕರನ್ನೊಳಗೊಂಡ ಸಂಸ್ಥೆಯು ಬಳಿಕ ತುಂಬೆ ಪದವಿ ಪೂರ್ವ ಕಾಲೇಜು, ತುಂಬೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ತುಂಬೆ ಸೆಂಟ್ರಲ್ ಸ್ಕೂಲ್ ನಡೆಯುತ್ತಿದ್ದು, 1,300 ವಿದ್ಯಾರ್ಥಿಗಳು ಹಾಗೂ 80 ಮಂದಿ ಸಿಬ್ಬಂದಿ ವರ್ಗದವರಿದ್ದಾರೆ.

ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ:

2004ರಲ್ಲಿ ತುಂಬೆಯಲ್ಲಿ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಸ್ಥಾಪಿಸಿದ್ದು, ಪ್ರಸಕ್ತ ವರ್ಷ 75 ವಿದ್ಯಾರ್ಥಿಗಳು ಹಾಗೂ 8 ಸಿಬ್ಬಂದಿ ವರ್ಗದವರಿದ್ದಾರೆ. 2009ರಲ್ಲಿ ತುಂಬೆ ಬಿ.ಎ. ಆಸ್ಪತ್ರೆಯನ್ನು ಪ್ರಾರಂಭಿಸಿದ್ದು, 2013ರಿಂದ ಈ ಆಸ್ಪತ್ರೆಯನ್ನು ಕಂಕನಾಡಿಯ ಫಾದರ್ ಮುಲ್ಲರ್ಸ್‌ ಆಸ್ಪತ್ರೆ ಸಂಸ್ಥೆಯು ನಡೆಸುತ್ತಿದೆ.

ಸಮಾಜ ಸೇವೆ:

ಯಶಸ್ವಿ ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ತಾನು ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಸಮಾಜದ ಉನ್ನತಿಗಾಗಿ ನೀಡುವ ಹಾಜಿಯವರು, ಕಂದಕ್ ಬದ್ರಿಯಾ ಶಿಕ್ಷಣ ಸಂಸ್ಥೆ ಮಂಗಳೂರು, ಕ್ರೆಸೆಂಟ್ ಶಿಕ್ಷಣ ಸಂಸ್ಥೆ ಬಂದರ್, ನವಭಾರತ ರಾತ್ರಿ ಪ್ರೌಢಶಾಲೆ ಕಾರ್‌ಸ್ಟ್ರೀಟ್ ಮಗಳೂರು, ಕಸಬಾ ಶಾಲಾಭಿವೃದ್ಧಿ ಸಮಿತಿ ಬೆಂಗರೆ-ಮಂಗಳೂರು, ಸೀರತ್ ಕಮಿಟಿಯ ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಇವುಗಳ ಅಧ್ಯಕ್ಷರಾಗಿ, ಸೆಂಟ್ರಲ್ ಮುಸ್ಲಿಂ ಕಮಿಟಿ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಮಾಜಿ ಅಧ್ಯಕ್ಷರಾಗಿ, ಯೆನೆಪೋಯ ಮೆಡಿಕಲ್ ಕಾಲೇಜು ಹಾಗೂ ಯೆನೆಪೋಯ ಡೆಂಟಲ್ ಕಾಲೇಜು ಮಂಗಳೂರು ಇದರ ಟ್ರಸ್ಟಿಯಾಗಿ, ಅಲ್-ಅಮೀನ್ ಎಜುಕೇಶನ್ ಸೊಸೈಟಿ ಬೆಂಗಳೂರು ಇದರ ಮಾಜಿ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ನ ಮಾಜಿ ಸದಸ್ಯರಾಗಿ, ಮಣಿಪಾಲ್ ಇಂಡಸ್ಟ್ರೀಸ್ ಇದರ ಮಾಜಿ ನಿರ್ದೇಶಕರಾಗಿ ಹೀಗೆ ಜಿಲ್ಲೆಯ, ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಸ್ಥಾಪಕರಾಗಿ, ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಗಲ್ಫ್ ಮೆಡಿಕಲ್ ಯುನಿರ್ವಸಿಟಿ:

1998ರಲ್ಲಿ ಯುಎಇಯ ಅಜ್ಮಾನ್‌ನಲ್ಲಿ ಗಲ್ಫ್ ಮೆಡಿಕಲ್ ಕಾಲೇಜನ್ನು ಅಹ್ಮದ್ ಹಾಜಿ ಅವರ ಪುತ್ರ ತುಂಬೆ ಮುಹಿಯುದ್ದೀನ್ ಅವರು ಸ್ಥಾಪಿಸಿದ್ದು, ಈಗ ಅದು ಗಲ್ಫ್ ಯುನಿರ್ವಸಿಟಿಯಾಗಿದೆ. ಗಲ್ಫ್ ಮೆಡಿಕಲ್ ಕಾಲೇಜು ಬಿ.ಎ. ಉದ್ಯಮದ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದಂತಿದೆ. ಇಲ್ಲಿ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ಪಿಸಿಯೋಥೆರಪಿ ಕಾಲೇಜು ಹಾಗೂ ರೀಟೇಲ್ ಮತ್ತು ಹೋಲ್‌ಸೇಲ್ ಮೆಡಿಕಲ್‌ಗಳು ಯುಎಇನಲ್ಲಿವೆ. ಇದೀಗ ಈ ಸಂಸ್ಥೆಯು ಅಂತಾರಾಷ್ಟ್ರೀಯ ಮೆಡಿಕಲ್ ಯುನಿರ್ವಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತುಂಬೆ ಗ್ರಾಮೀಣ ಮಹಿಳಾ ವಿಕಾಸ ಸಂಸ್ಥೆ:

1999ರಲ್ಲಿ ಹಾಜಿಯವರ ಪತ್ನಿ ಬಿಫಾತಿಮಾ ಅವರು ಗ್ರಾಮೀಣ ಮಹಿಳಾ ವಿಕಾಸ ಸಂಸ್ಥೆಯನ್ನು ಆರಂಭಿಸಿದರು. ಇಲ್ಲಿ ಮಹಿಳೆಯವರಿಂದ ರೆಡಿಮೆಡ್ ಗಾರ್ಮೆಂಟ್ಸ್, ಫಿನಾಯಿಲ್ ಮುಂತಾದ ಸಾಮಗ್ರಿಗಳನ್ನು ಉತ್ಪಾದಿಸುತ್ತಿದ್ದು, ಮಹಿಳೆಯರ ಸ್ವ-ಉದ್ಯೋಗಕ್ಕೆ ಈ ಸಂಸ್ಥೆ ಸಹಾಯ ಮಾಡುತ್ತಿದೆ. ಬಿ.ಎ. ಗ್ರೂಫ್‌ನಲ್ಲಿ ಸುಮಾರು 25ಕ್ಕೂ ಮಿಕ್ಕಿ ಸಂಸ್ಥೆಗಳಿದ್ದು, ಸುಮಾರು 1500 ಮಂದಿ ಸಿಬ್ಬಂದಿಯವರಿದ್ದಾರೆ. ಇದೀಗ ಬಿಎ ಗ್ರೂಪ್‌ನ ವ್ಯವಹಾರವು ಕಂಪ್ಯೂಟರ್ ಸಾಫ್ಟ್‌ವೇರ್‌ಗೂ ವಿಸ್ತರಿಸಿದ್ದು, ಇವರ ಪುತ್ರರು ಈ ವ್ಯವಹಾರವನ್ನು ನಡೆಸುತ್ತಿದ್ದಾರೆ.

ಸಂತೃಪ್ತ ಕುಟುಂಬ:

ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಪತ್ನಿ ಭಿಮಾತಿಮಾ, ಪುತ್ರರಾದ ತುಂಬೆ ಮೊಯ್ದೀನ್, ಅಬ್ದುಲ್ ಸಲಾಂ, ಬಿ.ಎಂ ಅಶ್ರಫ್‌ರೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ತುಂಬೆ ಮೊಯ್ದಿನ್ ಅವರು ಯುಎಇ ಯಲ್ಲಿ ಪ್ರತಿಷ್ಠಿತ ತುಂಬೆ ಗ್ರೂಪ್ ಎಂಬ ಬೃಹತ್ ಉದ್ಯಮ, ಅರೋಗ್ಯ ಸೇವೆಗಳ ಸಮೂಹವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಬ್ದುಲ್ ಸಲಾಂ ಅವರು ಬಿ.ಎ. ಉದ್ಯಮ ಸಮೂಹದ ಆಡಳಿತ ನಿರ್ದೇಶಕರಾಗಿದ್ದಾರೆ. ಅಶ್ರಫ್ ಅವರು ಯುಎಇ ಯಲ್ಲಿ ಮೊಹಿಯುದ್ದೀನ್ ವುಡ್ ವರ್ಕ್ಸ್ ಎಂಬ ಪ್ರಖ್ಯಾತ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.

ಇವರ ಪುತ್ರಿ ಮರಿಯಂ ಶಬನಾ ಹಾಗೂ ಅಳಿಯ ಕೆ.ಇ. ಫೈಝಲ್ ಹಾಜಿ ಅವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಯಶಸ್ವಿ ಉದ್ಯಮಿಯಾಗಿ ಮಿಂಚುತ್ತಿದ್ದಾರೆ.

ಬಿ.ಎ. ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ಬಿ.ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ವಿವಿಧ ಕ್ಷೇತ್ರಗಳ ಜೀವಮಾನ ಸಾಧನೆಗೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News