ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ ಕೇರಳದ ಫುಟ್ಬಾಲ್ ದಂತಕತೆ

Update: 2019-02-09 16:30 GMT

ತ್ರಿಶೂರು,ಫೆ.9: ಕೇರಳದ ಫುಟ್ಬಾಲ್ ದಂತಕತೆ ಐ.ಎಂ ವಿಜಯನ್ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ನಿರಾಕರಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಅಳತ್ತೂರು ಕ್ಷೇತ್ರದಿಂದ ಪಕ್ಷದ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಗೆಳೆಯ ಮತ್ತು ಸ್ಥಳೀಯ ಕಾಂಗ್ರೆಸ್ ಶಾಸಕ ಅನಿಲ್ ಅಕ್ಕರ ಮನವಿ ಮಾಡಿದ್ದರು ಎಂದು ಸದ್ಯ ಕೇರಳ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಜಯನ್ ತಿಳಿಸಿದ್ದಾರೆ.

“ನನಗೆ ಕೇರಳ ಪೊಲೀಸ್ ಇಲಾಖೆಯಲ್ಲಿ ಮೊದಲು ಉದ್ಯೋಗ ಒದಗಿಸಿದವರು ಕೆ.ಕರುಣಾಕರನ್. ಹಾಗಾಗಿ ನಾನು ಎಂದೆಂದೂ ಕಾಂಗ್ರೆಸ್ ನಾಯಕರಿಗೆ ಋಣಿಯಾಗಿರುತ್ತೇನೆ. ನಂತರ ನಾನು ಕೇರಳ ತೊರೆದು ಕೊಲ್ಕತಾ ಮತ್ತು ಪಂಜಾಬ್‌ಗಾಗಿ ಆಡಿದೆ. ಅಲ್ಲಿಂದ ವಾಪಸ್ ಬಂದ ನಂತರ ಸದ್ಯ ಸಿಪಿಐ-ಎಂನ ರಾಜ್ಯ ಕಾರ್ಯದರ್ಶಿಯಾಗಿರುವ ಕೊಡಿಯೇರಿ ಬಾಲಕೃಷ್ಣನ್ ಮತ್ತೆ ನನ್ನನ್ನು ಕೇರಳ ಪೊಲೀಸ್‌ಗೆ ಸೇರಿಸಿದರು. ಸದ್ಯ ನಾನು ನಿವೃತ್ತಿ ಹೊಂದಲು ಇನ್ನೂ ಆರು ವರ್ಷಗಳಿವೆ. ಹಾಗಾಗಿ ನಂತರವೇ ಮುಂದಿನ ಜೀವನದ ಬಗ್ಗೆ ಯೋಚಿಸಲಿದ್ದೇನೆ” ಎಂದು ವಿಜಯನ್ ತಿಳಿಸಿದ್ದಾರೆ.

ಅರ್ಜುನ ಪ್ರಶಸ್ತಿ ವಿಜೇತರಾದ ವಿಜಯನ್ 1993,97 ಮತ್ತು 99 ಹೀಗೆ ಮೂರು ಬಾರಿ ವರ್ಷದ ಭಾರತೀಯ ಆಟಗಾರ ಎಂಬ ಬಿರುದನ್ನು ಪಡೆದುಕೊಂಡಿದ್ದರು. ಈ ಬಿರುದನ್ನು ಮೂರು ಬಾರಿ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಸಿಪಿಐ-ಎಂನ ಭದ್ರಕೋಟೆಯಾಗಿರುವ ಅಳತ್ತೂರು ಲೋಕಸಭಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News