ಸಂಸದೀಯ ವಿಚಾರಣೆಗೆ ಗೈರಾಗಲಿರುವ ಟ್ವಿಟರ್ ಸಿಇಒ, ಉನ್ನತ ಅಧಿಕಾರಿಗಳು: ವರದಿ

Update: 2019-02-09 16:33 GMT

ಹೊಸದಿಲ್ಲಿ, ಫೆ.9: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಾಗರಿಕರ ಹಕ್ಕುಗಳನ್ನು ಕಾಪಾಡುವ ವಿಷಯದ ಕುರಿತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಮುಂದೆ ವಿಚಾರಣೆಗೆ ಟ್ವಿಟರ್ ಸಿಇಒ ಮತ್ತು ಉನ್ನತ ಅಧಿಕಾರಿಗಳು ಹಾಜರಾಗುವುದಿಲ್ಲ ಎಂದು ಸಮಿತಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೇತೃತ್ವದ ಸಂಸದೀಯ ಸಮಿತಿ ಫೆಬ್ರವರಿ ಒಂದರಂದು ಅಧಿಕೃತ ಪತ್ರದ ಮೂಲಕ ಟ್ವಿಟರ್‌ಗೆ ಸಮನ್ಸ್ ಜಾರಿ ಮಾಡಿತ್ತು. ಫೆಬ್ರವರಿ 7ರಂದು ನಡೆಸಲು ಉದ್ದೇಶಿಸಲಾಗಿದ್ದ ಸಮಿತಿಯ ಸಭೆಯನ್ನು, ಟ್ವಿಟರ್ ಸಿಇಒ ಮತ್ತು ಅಧಿಕಾರಿಗಳಿಗೆ ಅನುಕೂಲವಾಗುವಂತೆ ಫೆಬ್ರವರಿ 11ಕ್ಕೆ ಮುಂದೂಡಲಾಗಿತ್ತು. ಹತ್ತು ದಿನಗಳ ಮೊದಲೇ ಪತ್ರವನ್ನು ಕಳುಹಿಸಿದ್ದರೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ವಿಟರ್, ವಿಚಾರಣೆಗೆ ಆಗಮಿಸಲು ಪತ್ರವನ್ನು ವಿಳಂಬವಾಗಿ ಕಳುಹಿಸಿರುವ ಕಾರಣ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

ಭಾರತೀಯ ಸಂಸದೀಯ ಮಾಹಿತಿ ತಂತ್ರಜ್ಞಾನ ಸಮಿತಿಯ ಸಭೆಯಲ್ಲಿ ಟ್ವಿಟರನ್ನು ಪ್ರತಿನಿಧಿಸಲು ಉನ್ನತ ಅಧಿಕಾರಿಗಳ ಬದಲಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವಿಲ್ಲದ ಕಿರಿಯ ಅಧಿಕಾರಿಗಳನ್ನು ಕಳುಹಿಸುತ್ತಿರುವುದು ಸಮಿತಿಯ ಸದಸ್ಯರಿಗೆ ಅಸಮಾಧಾನವುಂಟುಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಾಗತಿಕವಾಗಿ ಟ್ವಿಟ್ಟರ್ ಹಲವು ಬಾರಿ ಪರಿಶೀಲನೆಗೆ ಒಳಗಾಗಿದ್ದು ಅಮೆರಿಕ, ಸಿಂಗಾಪುರ ಮತ್ತು ಐರೋಪ್ಯ ಒಕ್ಕೂಟದ ನಂತರ ಇದೀಗ ಭಾರತದಲ್ಲಿ ಸಂಸದೀಯ ವಿಚಾರಣಗೆ ಒಳಗಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News