ಮಸೀದಿಯಲ್ಲಿ 6 ಮಂದಿಯ ಹತ್ಯೆ ಪ್ರಕರಣ: ಹಂತಕನಿಗೆ ಜೀವಾವಧಿ ಶಿಕ್ಷೆ

Update: 2019-02-09 17:49 GMT

 ಕ್ವಿಬೆಕ್‌ಸಿಟಿ, ಫೆ.9: 2017ರಲ್ಲಿ ಕೆನಡದ ಕ್ವಿಬೆಕ್ ನಗರದ ಮಸೀದಿಯೊಂದರಲ್ಲಿ ಆರು ಮಂದಿ ಮುಸ್ಲಿಮರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ಆರೋಪಿ 29 ವರ್ಷ ವಯಸ್ಸಿನ ಯುವಕನೊಬ್ಬನಿಗೆ ಸ್ಥಳೀಯ ನ್ಯಾಯಾಲಯವು ಶುಕ್ರವಾರ ಜೀವನಪರ್ಯಂತ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

 ಆರೋಪಿ ಅಲೆಕ್ಸಾಂಡ್ರೆ ಬಿಸ್ಸೊನ್ನೆಟ್‌ಗೆ ಮುಂದಿನ 40 ವರ್ಷಗಳವರೆಗೆ ಪರೋಲ್‌ನಲ್ಲಿ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡದಿರುವಂತೆಯೂ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

 ಮುಸ್ಲಿಂ ವಲಸಿಗರ ವಿರುದ್ಧ ಹಂತಕನ ವಿಷಕಾರಕ ದ್ವೇಷದ ಮನೋಭಾವನೆಯ ಬಗ್ಗೆ ನ್ಯಾಯಾಧೀಶ ಫ್ರಾಂಕೊಯಿಸ್ ಹ್ಯೂಯೊಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದರು. ‘‘ ನಿನಗಿಂತ ವಿಭಿನ್ನರಾಗಿದ್ದಾರೆಂಬ ಏಕೈಕ ಕಾರಣಕ್ಕಾಗಿ ನಿನ್ನ ಆರು ಮಂದಿ ಸಹಚರರನ್ನು ನೀನು ಹತ್ಯೆಗೈದಿರುವಿ’’ ಎಂದು ಅವರು ತೀರ್ಪು ಓದುತ್ತಾ ತಿಳಿಸಿದರು.

 ‘‘ನಿನ್ನ ದ್ವೇಷ ಹಾಗೂ ಜನಾಂಗೀಯವಾದದಿಂದಾಗಿ, ನೀನು ಅವರ ಬದುಕನ್ನು ನಾಶಪಡಿಸಿದೆ, ಜೊತೆಗೆ ನಿನ್ನ ಹಾಗೂ ನಿನ್ನ ಪಾಲಕರ ಬದುಕನ್ನು ಕೂಡಾ ಭಗ್ನಗೊಳಿಸಿರುವಿ. ನೀನು ಎಸಗಿದ ಅಪರಾಧವು, ತೀವ್ರವಾದ ಖಂಡನೆಗೆ ಅರ್ಹವಾಗಿದೆ’’ ಎಂದವರು ಹೇಳಿದರು.

 ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದ ಬಿಸ್ಸೊನೆಟ್ಟ್, 2017ರ ಜನವರಿ 29ರಂದು ಕ್ಯುಬೆಕ್‌ನ ಸೈಂಟ್ ಫೋಯೆ ಪ್ರದೇಶದಲ್ಲಿರುವ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರದ ಮಸೀದಿಯಲ್ಲಿ ಪ್ರಾರ್ಥನಾನಿರತರ ಮೇಲೆ ಗುಂಡು ಹಾರಿಸಿ, ಆರು ಮಂದಿಯನ್ನು ಹತ್ಯೆಗೈದಿದ್ದನು.

ಬಿಸ್ಸೊನೆಟ್ ರಾಷ್ಟ್ರವಾದಿ ಹಾಗೂ ಬಿಳಿ ಜನಾಂಗೀಯ ಶ್ರೇಷ್ಠತಾವಾದಿ ಚಿಂತನೆಗಳಿಂದ ಪ್ರೇರಿತನಾಗಿದ್ದ. ಆತ ಎಸಗಿದ ಈ ಅಪರಾಧವು ನಮ್ಮ ಮೂಲಭೂತ ಸಾಮಾಜಿಕ ಮೌಲ್ಯಗಳನ್ನು ಕಡೆಗಣಿಸಿದೆಯೆಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News