ಫೆ. 19ರಂದು ಜಾಧವ್ ವಿರುದ್ಧ ಸಾಕ್ಷಗಳನ್ನು ಐಸಿಜೆಗೆ ಪಾಕ್ ಸಲ್ಲಿಕೆ?

Update: 2019-02-09 17:31 GMT

 ಇಸ್ಲಾಮಾಬಾದ್, ಫೆ.9: ಪಾಕಿಸ್ತಾನದಲ್ಲಿ ಬೇಹುಗಾರಿಕೆಯ ಆರೋಪದಲ್ಲಿ ಬಂಧಿಸಲ್ಪಟ್ಟ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರು ‘‘ ವಿಧ್ವಂಸಕ ಚಟುವಟಿಕೆ’’ಗಳಲ್ಲಿ ತೊಡಗಿದ್ದರೆಂಬುದನ್ನು ಸಾಬೀತುಪಡಿಸುವ ಸಾಕ್ಷಾಧಾರಗಳನ್ನು ಪಾಕಿಸ್ತಾನವು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಫೆಬ್ರವರಿ 19ರೊಳಗೆ ಒದಗಿಸಲಿದೆಯೆಂದು ವಿದೇಶಾಂಗ ಸಚಿವ ಸಾ ಮೆಹಮೂದ್ ಖುರೈಷಿ ಶುಕ್ರವಾರ ತಿಳಿಸಿದ್ದಾರೆ.

ಬೇಹುಗಾರಿಕೆಯ ಆರೋಪದಲ್ಲಿ 48 ವರ್ಷದ ಜಾಧವ್ ಅವರಿಗೆ ಪಾಕ್ ಸೇನಾ ನ್ಯಾಯಾಲಯವು 2017ರ ಎಪ್ರಿಲ್‌ ನಲ್ಲಿ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ತೀರ್ಪನ್ನು ಪ್ರಶ್ನಿಸಿ ಭಾರತವು ಅದೇ ವರ್ಷದ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದ ಮೆಟ್ಟಲೇರಿತ್ತು. ತದನಂತರ ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಧವ್‌ ಗೆ ಮರಣದಂಡನೆ ವಿಧಿಸುವುದಕ್ಕೆ ತಡೆಯಾಜ್ಞೆ ವಿಧಿಸಿತ್ತು.

ಈ ಕುರಿತ ತೀರ್ಪು ವಿಚಾರಣೆಗೆ ಬಾಕಿಯಿದೆ. ಭಾರತ ಹಾಗೂ ಪಾಕಿಸ್ತಾನ ಎರಡೂ ಈಗಾಗಲೇ ತಮ್ಮ ವಿಸ್ತೃತವಾದ ಮನವಿಗಳನ್ನು ಹಾಗೂ ಪ್ರತಿಕ್ರಿಯೆಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅವು ಫೆಬ್ರವರಿ 18ರಿಂದ 21ರವರೆಗೆ ಆಲಿಕೆಗೆ ಬರಲಿವೆ. ಜಾಧವ್ ವಿರುದ್ಧ ಪಾಕ್ ಹೊರಿಸಿರುವ ಎಲ್ಲಾ ಆರೋಪಗಳನ್ನು ಭಾರತವು ನಿರಾಕರಿಸಿದೆ ಹಾಗೂ ನಿವೃತ್ತಿ ಹೊಂದಿದ ಬಳಿಕ ಜಾಧವ್ , ಇರಾನ್‌ನಲ್ಲಿ ಉದ್ಯಮಿಯಾಗಿದ್ದು ಅವರನ್ನು ಅಲ್ಲಿಂದ ಅಪಹರಿಸಲಾಗಿದೆ ಮತ್ತು ಅವರಿಗೆ ತನ್ನ ಜೊತೆ ಯಾವುದೇ ಸಂಬಂಧವಿಲ್ಲವೆಂದು ಭಾರತ ಸರಕಾರ ವಾದಿಸಿದೆ.

 ಜಾಧವ್ ಅವರಿಗೆ ಭಾರತೀಯ ದೂತಾವಾಸದ ಸಂಪರ್ಕವನ್ನು ಒದಗಿಸಲು ಅವಕಾಶ ನೀಡದಿರುವ ಮೂಲಕ ಪಾಕಿಸ್ತಾನವು ವಿಯೆನ್ನಾ ಒಡಂಬಡಿಕೆಯನ್ನು ಉಲ್ಲಂಘಿಸಿದೆಯೆಂದು ಭಾರತ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News