×
Ad

ಸಿಎಜಿ ಮೆಹ್ರಿಷಿ ತನ್ನ ವಿರುದ್ಧವೇ ತನಿಖೆ ಮಾಡಲು ಹೇಗೆ ಸಾಧ್ಯ: ಕಪಿಲ್ ಸಿಬಲ್ ಪ್ರಶ್ನೆ

Update: 2019-02-10 22:27 IST

ಹೊಸದಿಲ್ಲಿ, ಫೆ. 10: ರಫೇಲ್ ಯುದ್ಧ ವಿಮಾನ ಒಪ್ಪಂದದ ವರದಿಯಲ್ಲಿ ಸಿಎಜಿ (ಮಹಾಲೇಖಪಾಲರು)ಯ ‘ಹಿತಾಸಕ್ತಿ ಸಂಘರ್ಷ’ ಬಗ್ಗೆ ಶನಿವಾರ ಟೀಕಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್‌ನ ಆಗಿನ ಅಧ್ಯಕ್ಷ ಪ್ರಾಂಸ್ವಾ ಒಲಾಂಡ್ ನಡುವಿನ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ಸಿಎಜಿ ರಾಜೀವ್ ಮೆಹ್ರಿಷಿ ಹಣಕಾಸು ಕಾರ್ಯದರ್ಶಿ ಯಾಗಿದ್ದರು ಎಂದಿದೆ.

ಸಿಎಜಿ ವರದಿ ಮಾಡಲು ‘ಹಿತಾಸಕ್ತಿ ಸಂಘರ್ಷ’ ಇರುವುದರಿಂದ ಮೆಹ್ರಿಷಿ ಅವರು ತನ್ನ ವಿರುದ್ಧವೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದುದರಿಂದ ರಫೇಲ್ ಒಪ್ಪಂದದ ಕುರಿತ ಸಿಎಜಿ ವರದಿಯಿಂದ ಅವರು ಹಿಂದೆ ಸರಿಯಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.

ವರದಿಯಲ್ಲಿ ಕೇಂದ್ರ ಸರಕಾರವನ್ನು ಸಂಪೂರ್ಣವಾಗಿ ರಕ್ಷಿಸಲು ಸಿಎಜಿ ಪ್ರಯತ್ನಿಸುತ್ತಿದೆ. ಆಗಿನ ಹಣಕಾಸು ಕಾರ್ಯದರ್ಶಿ ಯಾಗಿದ್ದ ರಾಜೀವ್ ಮೆಹ್ರಿಷಿ ಅವರ ಮೇಲ್ವಿಚಾರಣೆಯಲ್ಲಿ ಈ ಸಂಪೂರ್ಣ ಒಪ್ಪಂದ ಕಾರ್ಯರೂಪಕ್ಕೆ ಬಂದಿತ್ತು. ಹಣಕಾಸು ಸಚಿವಾಲಯ ಈ ಒಪ್ಪಂದವನ್ನು ಆರಂಭಿಸುವಾಗ ಅವರು ಅದರ ಭಾಗವಾಗಿದ್ದರು ಎಂದು ಸಿಬಲ್ ಹೇಳಿದ್ದಾರೆ.

  ಇದು ಭ್ರಷ್ಟ ಒಪ್ಪಂದ. ನ್ಯಾಯೋಚಿತ ತನಿಖೆ ನಡೆಸಬೇಕು. ಒಪ್ಪಂದ ಸಂದರ್ಭ ಅವರು ಹಣಕಾಸು ಸಚಿವರಾಗಿದ್ದುದರಿಂದ, ಅವರು ಅವರ ವಿರುದ್ಧವೇ ತನಿಖೆ ನಡೆಸಲು ಹೇಗೆ ಸಾಧ್ಯ. ಇದು ಸ್ಪಷ್ಟವಾಗಿ ‘ಹಿತಾಸಕ್ತಿ ಸಂಘರ್ಷ’ ಎಂದು ಅವರು ಹೇಳಿದ್ದಾರೆ.

ಒಪ್ಪಂದದ ಭ್ರಷ್ಟಾಚಾರದಲ್ಲಿ ಮಹರ್ಷಿ ಅವರು ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿದ ಸಿಬಲ್, ಮೆಹ್ರಿಷಿ 36 ರಫೇಲ್ ಯುದ್ಧ ವಿಮಾನದ ಒಪ್ಪಂದದ ಲೆಕ್ಕಾಚಾರ ಮಾಡಲು ಕಾರಣ ಹಾಗೂ ಸಂದರ್ಭ ಇಲ್ಲ ಎಂದು ಹೇಳಿದ್ದಾರೆ.

ಮೋದಿ ಸರಕಾರ ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದ ಸಿಬಲ್, ಯುದ್ಧ ವಿಮಾನದ ಬೆಲೆ ಏರಿದೆ ಹಾಗೂ ಎಚ್‌ಎಎಲ್‌ಗೆ ಒಳ ಗುತ್ತಿಗೆ ನೀಡದೆ, ಅನಿಲ್ ಅಂಬಾನಿ ನೂತನವಾಗಿ ಆರಂಭಿಸಿದ ರಿಲಾಯನ್ಸ್ ಗೆ ನೀಡಲಾಯಿತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News