ಎಂಐಟಿ ಸಮ್ಮೇಳನಕ್ಕೆ ಸುಬ್ರಮಣಿಯನ್ ಸ್ವಾಮಿಗೆ ಆಹ್ವಾನ: ಉಪನ್ಯಾಸಕರಿಂದ ತೀವ್ರ ವಿರೋಧ

Update: 2019-02-10 17:03 GMT

ಹೊಸದಿಲ್ಲಿ,ಫೆ.10: 9ನೇ ವಾರ್ಷಿಕ ಎಂಐಟಿ ಇಂಡಿಯಾ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಬಿಜೆಪಿಯ ಸುಬ್ರಮಣ್ಯನ್ ಸ್ವಾಮಿಯನ್ನು ಆಹ್ವಾನಿಸಿರುವುದರ ವಿರುದ್ಧ ಮಸಾಚುಸೆಟ್ಸ್ ತಾಂತ್ರಿಕ ಸಂಸ್ಥೆ (ಎಂಐಟಿ)ಯ ಉಪನ್ಯಾಸಕರ ಗುಂಪು ವಿರೋದ ವ್ಯಕ್ತಪಡಿಸಿದೆ.

ಈ ಬಗ್ಗೆ ಉಪನ್ಯಾಸಕರು ಹಾಕಿರುವ ಆನ್‌ಲೈನ್ ಮನವಿಯಲ್ಲಿ, ಸ್ವಾಮಿ ಇತ್ತೀಚೆಗೆ ಮಾಡಿರುವ ದ್ವೇಷ ಭಾಷಣ ಮತ್ತು ಬೈಪೋಲಾರ್ ಕಾಯಿಲೆಯಿರುವ ಜನರ ಬಗ್ಗೆ ಆಡಿರುವ ಮಾತುಗಳನ್ನು ಉಲ್ಲೇಖಿಸಿ ಆತಂಕ ವ್ಯಕ್ತಪಡಿಸಲಾಗಿದೆ. ಫೆಬ್ರವರಿ 16ರಂದು ನಡೆಯಲಿರುವ ಸಮ್ಮೇಳನದ ಜಾಲತಾಣದಲ್ಲಿ ಹೆಸರಿಸಲಾಗಿರುವ ಹದಿನೆಂಟು ಪ್ರಮುಖ ಭಾಷಣಕಾರರ ಪೈಕಿ ಸ್ವಾಮಿ ಒಬ್ಬರಾಗಿದ್ದಾರೆ. ಸ್ವಾಮಿಯ ಹೇಳಿಕೆಗಳು ಸಂಸ್ಥೆಯ ವೌಲ್ಯ ಮತ್ತು ತತ್ವಗಳಿಗೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದ್ದು ಇದಕ್ಕೆ ಉಪನ್ಯಾಸಕರಾದ ಅಭಿಜಿತ್ ಬ್ಯಾನರ್ಜಿ, ಅರಿಂದಮ್ ದತ್ತಾ, ಬಾಲಕೃಷ್ಣನ್ ರಾಜಗೋಪಾಲ್, ಮೃಗಾಂಕ ಸುರ್, ಋತ್ ಪೆರ್ರಿ, ಸ್ಯಾಲಿ ಹಸ್ಲಂಗೆರ್, ಎಲಿಝಬೆತ್ ಎ ವುಡ್, ಹೆಲೆನ್ ಇ ಲೀ ಮತ್ತು ಅಭಾ ಸುರ್ ಸಹಿ ಹಾಕಿದ್ದಾರೆ. ಶನಿವಾರದ ವೇಳೆಗೆ ಈ ಮನವಿಗೆ 1,301 ಮಂದಿ ಸಹಿ ಹಾಕಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಮುಸ್ಲಿಮರ ಬಗ್ಗೆ ಆಡಿರುವ ಮಾತುಗಳು ದ್ವೇಷದಿಂದ ಕೂಡಿದೆ. ಸಮಾನ ಲಿಂಗದ ಜನರ ಮಧ್ಯೆ ಲೈಂಗಿಕತೆಯನ್ನು ನಿರಪರಾಧೀಕರಣಗೊಳಿಸುವ ಬಗ್ಗೆಯೂ ಅವರು ಆಕ್ಷೇಪ ಎತ್ತಿದ್ದರು. ಪ್ರಿಯಾಂಕಾ ಗಾಂಧಿಯನ್ನು ಬೈಪೋಲಾರ್ ಕಾಯಿಲೆ ಪೀಡಿತೆ ಎಂದು ಕರೆಯುತ್ತಾ, ಈ ಸಮಸ್ಯೆಯಿರುವವರು ನಾಯಕತ್ವವಹಿಸಿಕೊಳ್ಳಲು ಅನರ್ಹರು ಎಂದು ತಿಳಿಸಿದ್ದರು ಎಂದು ಮನವಿಯಲ್ಲಿ ವಿವರಿಸಲಾಗಿದೆ. 2011ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಕಲೆ ಮತ್ತು ವಿಜ್ಞಾನಗಳ ಉಪನ್ಯಾಸಕರು ಸ್ವಾಮಿಯನ್ನು ಬೋಧಿಸಲು ಆಹ್ವಾನಿಸದಿರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News