ವಿಪ್ ಉಲ್ಲಂಘಿಸಿದ 4 ಶಾಸಕರ ಅನರ್ಹಕ್ಕೆ ಸಭಾಧ್ಯಕ್ಷರಿಗೆ ಶಿಫಾರಸ್ಸು: ಸಿದ್ದರಾಮಯ್ಯ

Update: 2019-02-10 17:12 GMT

ಹೊಸದಿಲ್ಲಿ,ಪೆ.10: ಲೋಕಸಭಾ ಚುನಾವಣೆಯ ಸಿದ್ಧತೆ ಬಗ್ಗೆ ಇಂದು ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿಯವರ ಜೊತೆ ಚರ್ಚೆ ನಡೆಸಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸ್ಥಾನ ಹಂಚಿಕೆ ಬಗ್ಗೆ ಶೀಘ್ರ ಮಾತುಕತೆ ನಡೆಸುತ್ತೇವೆ. ಈ ತಿಂಗಳೊಳಗೆ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದು ನಮ್ಮ ಉದ್ದೇಶ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಎಐಸಿಸಿ ಅಧ್ಯಕ್ಷರಾದ ರಾಹುಲ್‌ ಗಾಂಧಿಯವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಆದಷ್ಟು ಬೇಗ ಸೀಟು ಹಂಚಿಕೆ ಮಾಡಿ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸೇರಿ ಸದ್ಯದಲ್ಲೇ ಈ ಬಗ್ಗೆ ಮಾತುಕತೆ ನಡೆಸುತ್ತೇವೆ. ವಿಪ್ ಉಲ್ಲಂಘಿಸಿದ ನಾಲ್ಕು ಶಾಸಕರನ್ನು ಅನರ್ಹಗೊಳಿಸಲು ಸಭಾಧ್ಯಕ್ಷರಿಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಮಂತ್ರಿ ಪದವಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಬಿ.ಸಿ ಪಾಟೀಲ್ ಅವರಿಗೆ ಅಸಮಧಾನ ಇದೆ. ಈ ವಿಚಾರವನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ. ಮಂತ್ರಿ ಸ್ಥಾನ ನೀಡುವ ಬಗ್ಗೆ ಮುಂದೆ ನೋಡೋಣ ಎಂದು ಹೇಳಿದ್ದೇನೆ ಎಂದು ತಿಳಿಸಿದರು. 

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ. ಇದೇ ತಿಂಗಳು 5,6 ಸಮಾವೇಶ ನಡೆಸಲಿದ್ದೇವೆ. ಇವುಗಳಲ್ಲಿ ಪಾಲ್ಗೊಳ್ಳಲು ಯಾವಾಗ ಕರೆದರೂ ಬರ್ತೇನೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿರುವುದು ನಮ್ಮನ್ನು ಉತ್ಸಾಹಿತರನ್ನಾಗಿ ಮಾಡಿದೆ. ಶಾಸಕರಾಗಿರುವ ರಮೇಶ್ ಜಾರಕಿಹೊಳಿ, ಉಮೇಶ್ ಜಾದವ್, ನಾಗೇಂದ್ರ ಮತ್ತು ಮಹೇಶ್ ಕುಮಟಹಳ್ಳಿ ಅವರು ವಿಪ್ ಉಲ್ಲಘಿಸಿರುವ ಕಾರಣ ಅನರ್ಹಗೊಳಿಸಲು ಕೋರಿ ಸ್ಪೀಕರ್ ಅವರಿಗೆ ನಾಳೆ ಮನವಿ ಮಾಡುತ್ತೇವೆ ಎಂದ ಅವರು, ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ರಾಹುಲ್ ಗಾಂಧಿಯವರಿಗೆ ವಿವರವಾಗಿ ತಿಳಿಸಿದ್ದೇನೆ. ಈ ರೀತಿಯ ಅಶಿಸ್ತು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News