ಮಾಂಸ ಉದ್ಯಮಿ ಖರೇಶಿಗೆ ಹೈಕೋರ್ಟ್ ನೋಟಿಸ್

Update: 2019-02-11 17:35 GMT

ಹೊಸದಿಲ್ಲಿ, ಫೆ.11: ವಿವಾದಿತ ಮಾಂಸ ಉದ್ಯಮಿ ಮೊಯಿನ್ ಖುರೇಶಿಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಬೇಕಿದ್ದರೆ ಆತನ ಭದ್ರತಾ ಮೊತ್ತ ಹೆಚ್ಚಿಸಬೇಕು ಎಂಬ ಸಿಬಿಐ ಅರ್ಜಿಯ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್ ಸೋಮವಾರ ಖುರೇಶಿಗೆ ನೋಟಿಸ್ ಜಾರಿಗೊಳಿಸಿದೆ.

ಯುಎಇಯಲ್ಲಿ ಫೆಬ್ರವರಿ 15ರಿಂದ 23ರವರೆಗೆ ನಡೆಯಲಿರುವ ಗಲ್ಫ್ ಫುಡ್ ಫೆಸ್ಟಿವಲ್ ಹಾಗೂ ಪಾಕಿಸ್ತಾನದಲ್ಲಿ ಮಾರ್ಚ್ 6ರಿಂದ 20ರವರೆಗೆ ನಡೆಯಲಿರುವ ಸೋದರ ಸಂಬಂಧಿಯ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಖುರೇಶಿಗೆ ವಿದೇಶ ಪ್ರಯಾಣಕ್ಕೆ ಇತ್ತೀಚೆಗೆ ವಿಚಾರಣಾ ನ್ಯಾಯಾಲಯ ಅನುಮತಿ ನೀಡಿತ್ತು. ಇದಕ್ಕಾಗಿ ಹೆಚ್ಚುವರಿ 2 ಕೋಟಿ ರೂ. ಮೊತ್ತದ ಭದ್ರತಾ ಹಣವನ್ನು ಬ್ಯಾಂಕ್ ಗ್ಯಾರಂಟಿಯಾಗಿ ಒದಗಿಸುವಂತೆ ಸೂಚಿಸಿತ್ತು.

ಈ ಭದ್ರತಾ ಹಣದ ಮೊತ್ತವನ್ನು ಹೆಚ್ಚಿಸಬೇಕೆಂದು ಕೋರಿ ಸಿಬಿಐ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ದಿಲ್ಲಿ ಮೂಲದ ಹವಾಲಾ ನಿರ್ವಾಹಕರ ಮೂಲಕ ಖುರೇಶಿ ಹವಾಲಾ ವ್ಯವಹಾರ ನಡೆಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಖುರೇಶಿ ವಿರುದ್ಧ ಪ್ರಕರಣ ದಾಖಲಾಗಿದೆ. 2017ರಲ್ಲಿ ಖುರೇಶಿಗೆ ಜಾಮೀನು ಮಂಜೂರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News