ಕಳ್ಳಭಟ್ಟಿ ಸಾರಾಯಿ ಪ್ರಕರಣ: ಉ.ಪ್ರದೇಶ ವಿಧಾನಸಭೆಯಲ್ಲಿ ಕೋಲಾಹಲ

Update: 2019-02-11 17:54 GMT

ಲಕ್ನೊ, ಫೆ.11: ರಾಜ್ಯ ಸರಕಾರದ ನಿರ್ಲಕ್ಷದ ಧೋರಣೆಯಿಂದ ಹಲವಾರು ಮಂದಿಯ ಸಾವಿಗೆ ಕಾರಣವಾದ ಕಳ್ಳಭಟ್ಟಿ ಸಾರಾಯಿ ಪ್ರಕರಣ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು ಸೋಮವಾರ ಉ.ಪ್ರದೇಶ ವಿಧಾನಸಭೆಯಲ್ಲಿ ತೀವ್ರ ಗದ್ದಲ ನಡೆಸಿದರಲ್ಲದೆ ಮುಖ್ಯಮಂತ್ರಿ ಆದಿತ್ಯನಾಥ್ ರಾಜೀನಾಮೆಗೆ ಆಗ್ರಹಿಸಿದರು.

ಕೋಲಾಹಲದ ಮಧ್ಯೆಯೇ ಪ್ರಶ್ತೋತ್ತರ ಅವಧಿಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ , ಕಳ್ಳಭಟ್ಟಿ ಸಾರಾಯಿ ದುರಂತ ಪ್ರಕರಣ ಅತ್ಯಂತ ಪ್ರಮುಖ ವಿಷಯವಾಗಿರುವ ಕಾರಣ ಇದರ ಬಗ್ಗೆ ಮೊದಲು ಚರ್ಚೆ ನಡೆಯಬೇಕೆಂದು ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಈ ಸಂದರ್ಭ ಸದನದ ಬಾವಿಗೆ ನುಗ್ಗಿದ ಎಸ್ಪಿ ಮತ್ತು ಬಿಎಸ್ಪಿ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಹಂತದಲ್ಲಿ ಮಾತನಾಡಿದ ಸಂಸದೀಯ ವ್ಯವಹಾರ ಸಚಿವ ಸುರೇಶ್ ಕುಮಾರ್ ಖನ್ನ, ಈ ವಿಷಯದಲ್ಲಿ ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಪ್ರಕರಣದಲ್ಲಿ ಶಾಮೀಲಾಗಿರುವವರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದಾಗ , ಪ್ರತಿಪಕ್ಷಗಳ ಸದಸ್ಯರು ‘ಮುಖ್ಯಮಂತ್ರಿಗಳೇ ರಾಜೀನಾಮೆ ನೀಡಿ’ ಎಂಬ ಘೋಷಣೆ ಕೂಗಿದರು. ತಮ್ಮ ಆಸನಕ್ಕೆ ಮರಳುವಂತೆ ಆಕ್ರೋಶಿತ ಸದಸ್ಯರಿಗೆ ಸ್ಪೀಕರ್ ಹೃದಯ್ ನಾರಾಯಣ್ ದೀಕ್ಷಿತ್ ಹಲವಾರು ಬಾರಿ ಮನವಿ ಮಾಡಿಕೊಂಡರೂ ಫಲ ನೀಡಲಿಲ್ಲ. ಆಗ ಅವರು ಅಪರಾಹ್ನದವರೆಗೆ ಕಲಾಪವನ್ನು ಮುಂದೂಡಿದ ಕಾರಣ ಇಡೀ ಪ್ರಶ್ನೋತ್ತರ ಅವಧಿ ವ್ಯರ್ಥವಾಯಿತು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡ ಅಜಯ್ ಕುಮಾರ್ ಲಲ್ಲು, ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಮತ್ತು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಕುಶಿನಗರ ಮತ್ತು ಸಹಾರನ್‌ಪುರದಲ್ಲಿ ನಡೆದಿರುವ ಕಳ್ಳಭಟ್ಟಿ ಸಾರಾಯಿ ದುರಂತ ಪ್ರಕರಣದ ತನಿಖೆಗಾಗಿ ಐವರು ಸದಸ್ಯರ ವಿಶೇಷ ತನಿಖಾ ತಂಡ(ಸಿಟ್) ರಚಿಸುವುದಾಗಿ ಸರಕಾರ ರವಿವಾರ ಘೋಷಿಸಿದೆ. ಈ ಪ್ರಕರಣದ ಹಿಂದೆ ಯಾವುದಾದರೂ ಷಡ್ಯಂತ್ರ ಅಡಗಿದೆಯೇ ಎಂದು ತನಿಖೆ ನಡೆಸಲು ಹಾಗೂ ಇಂತಹ ಪ್ರಕರಣ ಮರುಕಳಿಸದಿರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು 10 ದಿನಗಳೊಳಗೆ ವರದಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News