ಅನಿವಾಸಿ ಭಾರತೀಯರ ವಿವಾಹ ನೋಂದಣಿ ಕಡ್ಡಾಯಗೊಳಿಸುವ ಮಸೂದೆ ಮಂಡನೆ

Update: 2019-02-11 18:35 GMT

ಹೊಸದಿಲ್ಲಿ, ಫೆ.11: ಅನಿವಾಸಿ ಭಾರತೀಯರು(ಎನ್‌ಆರ್‌ಐ) ಭಾರತದ ಮಹಿಳೆಯರನ್ನು ವಿವಾಹವಾಗಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ವಿವಾಹವನ್ನು 30 ದಿನದೊಳಗೆ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಸೋಮವಾರ ಮಂಡಿಸಲಾಗಿದೆ.

ಅನಿವಾಸಿ ಭಾರತೀಯ ತನ್ನ ಮದುವೆಯನ್ನು 30 ದಿನದೊಳಗೆ ನೋಂದಣಿ ಮಾಡಿಸಿಕೊಳ್ಳದಿದ್ದಲ್ಲಿ ಆತನ ಪಾಸ್‌ಪೋರ್ಟನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ರದ್ದುಗೊಳಿಸಲು ಪಾಸ್‌ಪೋರ್ಟ್ ಅಧಿಕಾರಿಗಳಿಗೆ ಅವಕಾಶ ನೀಡುವ ಮಸೂದೆ ಇದಾಗಿದೆ. ಅಲ್ಲದೆ ಇಂತಹವರ ವಿರುದ್ಧ ವಾರಾಂಟ್ ಹೊರಡಿಸುವುದರ ಜೊತೆಗೆ, ‘ಘೋಷಿತ ಅಪರಾಧಿಗಳ’ ಸ್ಥಿರ ಮತ್ತು ಚರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲೂ ಅನಿವಾಸಿ ಭಾರತೀಯರ ವಿವಾಹ ನೋಂದಣಿ ಮಸೂದೆ 2019ರಲ್ಲಿ ಅವಕಾಶವಿರುತ್ತದೆ.

ಭಾರತದಲ್ಲಿ ಅಥವಾ ವಿದೇಶದಲ್ಲಿ ಭಾರತೀಯ ಮಹಿಳೆಯನ್ನು ವಿವಾಹವಾಗುವ ಎನ್‌ಆರ್‌ಐ ಗಳಿಗೆ ಈ ಪ್ರಸ್ತಾವಿತ ಕಾನೂನು ಅನ್ವಯವಾಗುತ್ತದೆ. ಬುಧವಾರ ಬಜೆಟ್ ಅಧಿವೇಶನದ ಕೊನೆಯ ದಿನವಾಗಿರುವ ಕಾರಣ (ಲೋಕಸಭಾ ಚುನಾವಣೆಗೂ ಮೊದಲಿನ ಕಡೆಯ ಅಧಿವೇಶನ) ಈ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಆದರೆ ರಾಜ್ಯಸಭೆಯಲ್ಲಿ ಮಂಡನೆಯಾಗಿರುವ ಕಾರಣ ಜೂನ್ 3ರಂದು 16ನೇ ಲೋಕಸಭೆಯ ಅವಧಿ ಅಂತ್ಯಗೊಂಡರೂ ಈ ಮಸೂದೆ ರದ್ದಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News