ದಕ್ಷಿಣ ಕನ್ನಡದಲ್ಲಿ ಯಾರಿಗೆ ಕಾಂಗ್ರೆಸ್ ಟಿಕೆಟ್?

Update: 2019-02-12 04:05 GMT
ಬಿ.ಕೆ.ಹರಿಪ್ರಸಾದ್.      ರಮಾನಾಥ ರೈ.

ಮಂಗಳೂರು, ಫೆ.11: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಈಗ ಮಂಗಳೂರಿನಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.ಸುಮಾರು ಮೂರು ದಶಕಗಳಿಂದ ಬಿಜೆಪಿ ಕೈಯಲ್ಲೇ ಇರುವ ಈ ಕ್ಷೇತ್ರವನ್ನು ಈ ಬಾರಿಯಾದರೂ ಗೆಲ್ಲಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಪಣ ತೊಟ್ಟಿದ್ದು, ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಈ ನಡುವೆ ಜಿಲ್ಲೆಯಿಂದ ಸ್ಪರ್ಧಿಸಲು ಹಲವು ಮುಖಂಡರು ದಿಲ್ಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ. ಎಂದಿನಂತೆ ಈ ಬಾರಿಯೂ ಕೊನೆ ಕ್ಷಣದವರೆಗೆ ಟಿಕೆಟ್ ಕುತೂಹಲವನ್ನು ಕಾಯ್ದಿಡುವ ಸಾಧ್ಯತೆ ಕಂಡು ಬರುತ್ತಿದೆ.

ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣುನಾಥನ್, ಮಾಣಕ್ಯ ಟಾಗೋರ್ ಮತ್ತು ಮಧು ಯಕ್ಷಿ ಗೌಡ್ ಇತ್ತೀಚಿಗೆ ಮಂಗಳೂರಿಗೆ ಆಗಮಿಸಿ ಪಕ್ಷದ ಮುಖಂಡರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಇವರ ಜೊತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಣಚೂರು ಮೋನು, ಮಿಥುನ್ ರೈ, ಕವಿತಾ ಸನಿಲ್, ಧನಂಜಯ ಅಡ್ಪಂಗಾಯ, ನವೀನ್ ಭಂಡಾರಿ, ಬಿ.ಇಬ್ರಾಹೀಂ, ಟಿ.ಎಂ.ಶಹೀದ್, ಶಾಲೆಟ್ ಪಿಂಟೊ, ಮಮತಾ ಗಟ್ಟಿ ಸಹಿತ ಹತ್ತಕ್ಕೂ ಅಧಿಕ ಮಂದಿ ಟಿಕೆಟ್ ಕೇಳಿ ಮನವಿ ಸಲ್ಲಿಸಿದ್ದಾರೆ. ಅಲ್ಪಸಂಖ್ಯಾತ ಕೋಟಾದಲ್ಲಿ ಕ್ರೈಸ್ತರಿಗೆ ಕೊಡುವುದಾದರೆ ನಾನು ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತೆ ಎಂ.ಪಿ. ಟಿಕೆಟ್ ಪಡೆಯಲು ದಿಲ್ಲಿಯಲ್ಲಿ ಲಾಬಿ ಮಾಡುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಬಂಟ್ವಾಳದಲ್ಲಿ ಸೋತಿರುವ ಮಾಜಿ ಸಚಿವ ಬಿ.ರಮಾನಾಥ ರೈಯವರಿಗೆ ಈ ಬಾರಿ ಹೇಗಾದರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ದಿಲ್ಲಿಗೆ ಹೋಗಬೇಕು ಎಂಬ ಉತ್ಸಾಹವಿದೆ. ಜಿಲ್ಲೆಯ ಹೆಚ್ಚಿನ ಕಾಂಗ್ರೆಸ್ ಮುಖಂಡರ ಮೇಲೆ ಸಾಕಷ್ಟು ಪ್ರಭಾವವನ್ನು ಹೊಂದಿರುವ ರೈ ತಮ್ಮ ಪರ ಹೈಕಮಾಂಡ್ ಬಳಿ ವಕಾಲತ್ತು ಮಾಡುವಂತೆಯೂ ನೋಡಿಕೊಂಡಿದ್ದಾರೆ. ಆದರೆ ಇನ್ನೂ ಮರೆಯದ ಅಸ್ಸೆಂಬ್ಲಿ ಸೋಲಿನ ನೆನಪು, ಜಿಲ್ಲೆಯಲ್ಲಿ ಸದ್ಯ ಇರುವ ಒಟ್ಟು ರಾಜಕೀಯ ವಾತಾವರಣ, ಬಿಲ್ಲವ - ಬಂಟರ ನಡುವಿನ ರಾಜಕೀಯ ಜಿದ್ದಾಜಿದ್ದಿ ಇತ್ಯಾದಿಗಳು ರೈಯವರ ಸ್ಪರ್ಧೆಗೆ ಪೂರಕವಾಗಿಲ್ಲ ಎಂದು ಪಕ್ಷದ ಮುಖಂಡರೇ ಖಾಸಗಿಯಾಗಿ ಹೇಳುತ್ತಾರೆ. ರೈ ಕಣಕ್ಕಿಳಿದರೆ ಮತ್ತೆ ನಳಿನ್ ಗೆಲುವು ಸುಲಭವಾಗಲಿದೆ ಎಂಬ ಅಭಿಪ್ರಾಯ ಪಕ್ಷದ ಕಾರ್ಯಕರ್ತರಲ್ಲಿದೆ. ಆದರೆ ಇದನ್ನು ನೇರವಾಗಿ ವರಿಷ್ಠರ ಬಳಿ ಅಥವಾ ಬಹಿರಂಗವಾಗಿ ಹೇಳಲು ಮಾತ್ರ ಯಾರೂ ಸಿದ್ಧರಿಲ್ಲ.

ಕಾಂಗ್ರೆಸ್‌ನ ಹಿರಿಯ ಮುಖಂಡ, ದಿಲ್ಲಿ ಮಟ್ಟದಲ್ಲಿ ಪ್ರಭಾವಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಈ ಬಾರಿ ಮಂಗಳೂರಿನತ್ತ ಗಂಭೀರವಾಗಿ ದೃಷ್ಟಿ ನೆಟ್ಟಿರುವುದು ಹೊಸ ಬೆಳವಣಿಗೆ. ಪಕ್ಷದಲ್ಲಿ ಹಲವಾರು ಮಹತ್ವದ ಜವಾಬ್ದಾರಿ ನಿರ್ವಹಿಸಿ ಸೋನಿಯಾ, ರಾಹುಲ್‌ರಿಗೆ ಆಪ್ತರಾಗಿರುವ ಹರಿಪ್ರಸಾದ್ ಇತ್ತೀಚಿಗೆ ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ವಿಪಕ್ಷ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನಸೆಳೆದಿದ್ದರು. ಜಿಲ್ಲೆಯಲ್ಲಿ ತುಂಬಾ ಪರಿಚಿತ ಅಲ್ಲದಿದ್ದರೂ ಮತದಾರರ ಪೈಕಿ ನಿರ್ಣಾಯಕರಾಗಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರು ಹಾಗೂ ಸಂಸತ್ತಿನಲ್ಲಿ ಪರಿಣಾಮಕಾರಿಯಾಗಿ ಮಾತನಾಡುವವರು ಎಂಬ ಅಂಶ ಇವರ ಬೆಂಬಲಕ್ಕಿದೆ. ನಳಿನ್‌ರಿಗೆ ಸಮರ್ಥ ಪ್ರತಿಸ್ಪರ್ಧೆ ನೀಡಲು ಸೂಕ್ತ ಬಿಲ್ಲವ ಅಭ್ಯರ್ಥಿಯೇ ಬೇಕು ಎಂಬುದು ಕಾಂಗ್ರೆಸ್‌ನ ಕಾರ್ಯಕರ್ತರ, ಸ್ಥಳೀಯ ಮುಖಂಡರ ಅಭಿಪ್ರಾಯ. ಅದಕ್ಕೆ ವಿನಯ ಕುಮಾರ್ ಸೊರಕೆಗಿಂತ ಹರಿಪ್ರಸಾದ್ ಹೆಚ್ಚು ಸೂಕ್ತ ಎಂಬುದು ಪಕ್ಷದೊಳಗೆ ಕೇಳಿ ಬರುತ್ತಿರುವ ಮಾತು. ಇದಕ್ಕೆ ಪೂರಕವಾಗಿ ಎಐಸಿಸಿ ವೀಕ್ಷಕರ ಬಳಿ ಹರಿಪ್ರಸಾದ್‌ರಿಗೆ ಟಿಕೆಟ್ ಕೊಡಿ ಎಂದು ಹೇಳಿದವರಲ್ಲಿ ಜಿಲ್ಲೆಯ ಮಾಜಿ ಶಾಸಕರು, ಪ್ರಮುಖ ಕಾಂಗ್ರೆಸ್ ಪದಾಧಿಕಾರಿಗಳು ಇದ್ದಾರೆ.

ಬಂಟ್ವಾಳ ಮೂಲದ ಕುಟುಂಬದಿಂದ ಬಂದು ಬಳಿಕ ಬೆಂಗಳೂರಿನಲ್ಲಿ ವಿದ್ಯಾರ್ಥಿ ರಾಜಕೀಯದ ಮೂಲಕ ಬೆಳೆದ ಹರಿಪ್ರಸಾದ್ ಬಿಹಾರದಂತಹ ಹಲವು ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆ, ಪಕ್ಷದ ಸಿದ್ಧಾಂತದಲ್ಲಿ ಅಚಲ ನಂಬಿಕೆ, ಮೋದಿ ಆಡಳಿತದ ವೈಫಲ್ಯ ಹಾಗೂ ನಳಿನ್ ಅವಧಿಯ ಲೋಪದೋಷಗಳನ್ನು ಮುಲಾಜಿಲ್ಲದೆ ಎತ್ತಿ ತೋರಿಸಿ ಮತ ಬಾಚುವ ಸಾಮರ್ಥ್ಯ, ಯುವಕರನ್ನು ಪಕ್ಷದತ್ತ ಸೆಳೆಯುವ ವ್ಯಕ್ತಿತ್ವ ಹರಿಪ್ರಸಾದ್ ಅವರಿಗಿದೆ ಎಂಬುದು ಸ್ಥಳೀಯ ಕಾಂಗ್ರೆಸ್ ಮುಖಂಡರ ಅಂದಾಜು. ಇನ್ನು ಕಳೆದ ಬಾರಿ ಸೋತಿರುವ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರಿಗೆ ಈ ಬಾರಿ ಟಿಕೆಟ್ ಸಾಧ್ಯತೆ ಬಹುತೇಕ ಇಲ್ಲ. ಹಾಗಾಗಿ ಅವರನ್ನೂ ತನ್ನ ಕಡೆಗೆ ಸೆಳೆದುಕೊಂಡರೆ ಹರಿಪ್ರಸಾದ್‌ರಿಗೆ ಟಿಕೆಟ್ ಹಾದಿ ಸುಗಮ ಎಂದು ಹೇಳಲಾಗುತ್ತಿದೆ. ಇನ್ನು ಹರಿಪ್ರಸಾದ್‌ರಿಗೆ ಟಿಕೆಟ್ ನೀಡಿದರೆ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅಭ್ಯಂತರ ಇರಲಿಕ್ಕಿಲ್ಲ ಎಂಬ ಲೆಕ್ಕಾಚಾರವೂ ಇದೆ.

ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂದು ಬಲವಾದ ಆಗ್ರಹ ಆ ಸಮುದಾಯದಿಂದ ಈ ಬಾರಿ ಕೇಳಿ ಬಂದಿದೆ. ಆದರೆ ಅದನ್ನು ಪಕ್ಷ ಅಷ್ಟು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಮುಸ್ಲಿಮರಿಗೆ ಟಿಕೆಟ್ ನೀಡಿದರೆ ದ.ಕ.ದಲ್ಲಿ ಗೆಲ್ಲುವುದು ಕಷ್ಟ ಎಂಬ ಸಬೂಬು ಈಗಾಗಲೇ ಸಿದ್ಧವಾಗಿರುವುದರಿಂದ ಆ ಸಾಧ್ಯತೆ ಕಡಿಮೆ. 

ಮೋದಿ ಆಡಳಿತದ ಬಗ್ಗೆ ಜನರಿಗೆ ಆಗಿರುವ ನಿರಾಶೆಯನ್ನು ಸೂಕ್ತವಾಗಿ ಬಳಸಿಕೊಳ್ಳುವ, ಸಂಸದ ನಳಿನ್ ಎರಡು ಅವಧಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎಂದು ಜನರಿಗೆ ಮನವರಿಕೆ ಮಾಡುವ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ ಸಂಘ ಪರಿವಾರದ ಶಕ್ತಿ ಕೇಂದ್ರದಲ್ಲಿ ಅದನ್ನು ಎದುರಿಸುವಂತೆ ಸಜ್ಜುಗೊಳಿಸುವ ಸೂಕ್ತ ಅಭ್ಯರ್ಥಿ ಈ ಬಾರಿ ಕಾಂಗ್ರೆಸ್‌ಗೆ ಬೇಕಾಗಿದೆ. ಪಕ್ಷದ ಹೈಕಮಾಂಡ್ ಈ ಎಲ್ಲ ಸಾಮರ್ಥ್ಯಗಳನ್ನು ಯಾರಲ್ಲಿ ಕಾಣುತ್ತದೆ ಎಂಬುದು ಈಗ ಯಕ್ಷ ಪ್ರಶ್ನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News