ಕೋಟ ಜೋಡಿ ಕೊಲೆ ಪ್ರಕರಣ: ವಿದ್ಯಾರ್ಥಿ ಸಹಿತ ಮತ್ತೆ ಐವರ ಬಂಧನ

Update: 2019-02-12 14:53 GMT

ಉಡುಪಿ, ಫೆ.12: ಕೋಟ ಮಣೂರು ಗ್ರಾಮದ ಚಿಕ್ಕನಕೆರೆ ಯುವಕರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿ ಸೇರಿದಂತೆ ಮತ್ತೆ ಐವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಉಡುಪಿ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಅಭಿಷೇಕ್ ಯಾನೆ ಅಭಿ ಪಾಲನ್ (23), ಬಾರಕೂರು ಉದ್ದಾಲ್‌ ಗುಡ್ಡೆಯ ಸಂತೋಷ್ ಕುಂದರ್ (36), ಬ್ರಹ್ಮಾವರ ದೂಪದಕಟ್ಟೆಯ ನಾಗರಾಜ ಯಾನೆ ರೊಟ್ಟಿ ನಾಗರಾಜ (44), ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನ್ಯೂ ಟೌನ್‌ನ ಪ್ರಣವ್ ರಾವ್ (20), ಶಂಕರನಾರಾಯಣ ಕಟ್ಟೆಮಕ್ಕಿಯ ಶಂಕರ ಮೊಗವೀರ (41) ಬಂಧಿತ ಆರೋಪಿಗಳು.

ಈ ಕೊಲೆ ಪ್ರಕರಣದಲ್ಲಿ ಅಭಿಷೇಕ್ ನೇರವಾಗಿ ಭಾಗಿಯಾಗಿದ್ದರೆ ಉಳಿದವರು ಸಹಕಾರ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ಈ ಮೂಲಕ ಪ್ರಕರಣದ ಬಂಧಿತ ಆರೋಪಿಗಳ ಸಂಖ್ಯೆ 13ಕ್ಕೆ ಏರಿದೆ. ಈ ಪ್ರಕರಣದಲ್ಲಿ ಇನ್ನು ಕೂಡ ಆರೋಪಿಗಳಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ.ನಿಂಬರಗಿ ತಿಳಿಸಿದ್ದಾರೆ.

ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಅಭಿಷೇಕ್ ಪೈಟಿಂಗ್ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದನು. ಅದೇ ರೀತಿ ಚಾಲಕ ವೃತ್ತಿ ಮಾಡಿಕೊಂಡಿದ್ದ ಸಂತೋಷ್ ಕುಂದರ್ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕಾರ ನೀಡಿದ್ದನು. ನಾಗರಾಜ್, ಬ್ರಹ್ಮಾವರ ಪೇತ್ರಿಯ ಬಾಯಾರಬೆಟ್ಟು ಎಂಬಲ್ಲಿ ರೈಸ್ ರೊಟ್ಟಿ ಫ್ಯಾಕ್ಟರಿಯನ್ನು ನಡೆಸುತ್ತಿದ್ದರೆ, ಶಂಕರ ಮೊಗವೀರ ಆಟೋ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದನು. ಇವರಿಬ್ಬರು ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ್ದರು.

ಪ್ರಸ್ತುತ ಉಡುಪಿಯ ಪೆಜಮಂಗೂರು ಗ್ರಾಮದ ಬೆನಗಲ್ ಎಂಬಲ್ಲಿ ವಾಸವಾಗಿರುವ ಪ್ರಣವ್ ರಾವ್ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಯಾಗಿದ್ದಾನೆ. ಈತ ಆರೋಪಿಗಳಿಗೆ ಹಣ, ಮೊಬೈಲ್ ಸರಬರಾಜು ಮಾಡಿ ರುವ ಆರೋಪ ಎದುರಿಸುತ್ತಿದ್ದಾನೆ.
ಬಂಧಿತ ಐವರು ಆರೋಪಿಗಳನ್ನು ಫೆ.11ರಂದು ಕುಂದಾಪುರ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲ ಆರೋಪಿಗಳನ್ನು ಫೆ.15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ಬ.ನಿಂಬರ್ಗಿ ತಿಳಿಸಿದ್ದಾರೆ.

ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಶೌಚಾಲಯ ಹೊಂಡದ ವಿವಾದಕ್ಕೆ ಸಂಬಂಧಿಸಿ ಭರತ್ ಕುಮಾರ್ ಮತ್ತು ಯತೀಶ್ ಎಂಬವರನ್ನು ಜ.26ರಂದು ಕೊಲೆಗೈದ ಪ್ರಕರಣದಲ್ಲಿ ಫೆ. 7ರಂದು ರಾಜಶೇಖರ ರೆಡ್ಡಿ, ಮೆಡಿಕಲ್ ರವಿ ಹಾಗೂ ಫೆ. 8ರಂದು ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿದ್ದು, ಫೆ.15ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಯಾದ ಪವನ್ ಅಮೀನ್ ಮತ್ತು ವೀರೇಂದ್ರ ಆಚಾರ್ಯ ಎಂಬವರನ್ನು ರವಿವಾರ ಬಂಧಿಸಿ ಫೆ.15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿದ್ಯಾರ್ಥಿಯಿಂದ ಮೊಬೈಲ್, ಹಣ ಸರಬರಾಜು

ಬಂಧಿತ ವಿದ್ಯಾರ್ಥಿ ಪ್ರಣವ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ರೌಡಿ ರಾಜಶೇಖರ ರೆಡ್ದಿ, ಹರೀಶ್ ರೆಡ್ಡಿಗೆ ಮೊಬೈಲ್ ಹಾಗೂ ಹಣ ಸರಬರಾಜು ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.

ಜ.26ರಂದು ಕೊಲೆಗೈದ ನಂತರ ಪ್ರಮುಖ ಆರೋಪಿಗಳು ಅದೇ ದಿನ ರಾತ್ರಿ ಈಗಾಗಲೇ ಬಂಧಿಸಲ್ಪಟ್ಟ ಪೊಲೀಸ್ ಸಿಬ್ಬಂದಿ ಪವನ್ ಅಮೀನ್ ಎಂಬವರ ಹೆಬ್ರಿಯ ಕುಚ್ಚೂರಿನಲ್ಲಿರುವ ಮನೆಯಲ್ಲಿ ತಂಗಿದ್ದರು. ಮರುದಿನ ಬೆಳಗ್ಗೆ ಹರೀಶ್ ರೆಡ್ಡಿ, ಪವನ್ ಅಮೀನ್‌ಗೆ ಕರೆ ಮಾಡಿ ಒಂದು ಸಿಮ್, ಮೊಬೈಲ್, ಹಣ ಮತ್ತು ಕೆಲವು ವಸ್ತುಗಳನ್ನು ಕಳುಹಿಸಿ ಕೊಡಲು ತಿಳಿಸಿದ್ದನು. ಅದರಂತೆ ಪವನ್ ಅಮೀನ್ ಅವುಗಳನ್ನು ತನ್ನ ಪರಿಚಯದ ವಿದ್ಯಾರ್ಥಿ ಪ್ರಣವ್ ಭಟ್ ಮೂಲಕ ಆರೋಪಿಗಳಿಗೆ ತಲುಪಿಸಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News