ಪ್ರಬಲ ವ್ಯಕ್ತಿಗಳು ದ್ವೇಷ ಮತ್ತು ವಿಭಜನೆ ಬಿತ್ತುತ್ತಿದ್ದಾರೆ: ಕಮಲಾ ಹ್ಯಾರಿಸ್

Update: 2019-02-12 14:49 GMT

ನ್ಯೂಯಾರ್ಕ್, ಫೆ. 12: ತನ್ನ ಕರಿಯ ವರ್ಣದ ಪರಂಪರೆ, ಪ್ರಾಸಿಕ್ಯೂಟರ್ ಆಗಿ ಅಲ್ಪಸಂಖ್ಯಾತರನ್ನು ಜೈಲಿಗೆ ತಳ್ಳಿರುವ ದಾಖಲೆ ಹಾಗೂ ಬಿಳಿಯ ವ್ಯಕ್ತಿಯನ್ನು ಮದುವೆಯಾಗಲು ತಾನು ತೆಗೆದುಕೊಂಡಿರುವ ನಿರ್ಧಾರವನ್ನು ಪ್ರಶ್ನಿಸಿರುವ ತನ್ನ ಟೀಕಾಕಾರರ ವಿರುದ್ಧ ಅಮೆರಿಕದ ಸೆನೆಟರ್ ಕಮಲಾ ಹ್ಯಾರಿಸ್ ನೇರ ವಾಗ್ದಾಳಿ ನಡೆಸಿದ್ದಾರೆ.

ಭಾರತ ಮತ್ತು ಜಮೈಕ ಮೂಲದ ಕಮಲಾ ಹ್ಯಾರಿಸ್ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

ನ್ಯೂಯಾರ್ಕ್‌ನ ‘ದ ಬ್ರೇಕ್‌ಫಾಸ್ಟ್ ಕ್ಲಬ್ ರೇಡಿಯೊ’ಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ಅವರು ತನ್ನ ವಿರೋಧಿಗಳ ವಿರುದ್ಧ ಮಾತಿನ ಪ್ರಹಾರ ನಡೆಸಿದರು ಎಂದು ಸಿಎನ್‌ಎನ್ ವರದಿ ಮಾಡಿದೆ.

‘‘ಕಮಲಾ ಹ್ಯಾರಿಸ್ ಆಫ್ರಿಕನ್-ಅಮೆರಿಕನ್ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ, ಅವರು ಆಫ್ರಿಕನ್-ಅಮೆರಿಕನ್ ಅಲ್ಲ. ಅವರ ಹೆತ್ತವರು ಭಾರತ ಮತ್ತು ಜಮೈಕದಲ್ಲಿ ಹುಟ್ಟಿ ಅಮೆರಿಕಕ್ಕೆ ವಲಸೆ ಬಂದವರು. ಅದೂ ಅಲ್ಲದೆ, ಅವರು ತನ್ನ ಹೈಸ್ಕೂಲ್ ವರ್ಷಗಳನ್ನು ಕೆನಡದಲ್ಲಿ ಕಳೆದವರು’’ ಎಂಬ ಆರೋಪದ ಬಗ್ಗೆ ಕಾರ್ಯಕ್ರಮದ ನಿರೂಪಕರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕಮಲಾ, ‘‘ನಾನು ಹುಟ್ಟಿದ್ದು ಓಕ್‌ ಲ್ಯಾಂಡ್‌ ನಲ್ಲಿ. ಕೆನಡದ ಮಾಂಟ್ರಿಯಲ್‌ನಲ್ಲಿ ಹೈಸ್ಕೂಲ್‌ಗೆ ಹೋಗಿರುವುದನ್ನು ಬಿಟ್ಟರೆ ನಾನು ಬೆಳೆದದ್ದು ಅಮೆರಿಕದಲ್ಲಿ’’ ಎಂದು ಹೇಳಿದರು.

‘‘ನೋಡಿ, ಇದನ್ನೇ ಅವರು ಬರಾಕ್ ಒಬಾಮ (ಅಮೆರಿಕದ ಮಾಜಿ ಅಧ್ಯಕ್ಷ)ಗೂ ಮಾಡಿದ್ದರು. ಇದು ನಮಗೆ ಹೊಸದಲ್ಲ. ಹಾಗಾಗಿ, ಅವರು ಏನು ಮಾಡಲು ಹೊರಟಿದ್ದಾರೆ ಎನ್ನುವುದು ನಮಗೆ ಗೊತ್ತಿದೆ’’ ಎಂದರು.

‘‘ಕಳೆದ ಎರಡು ವರ್ಷಗಳಿಂದ ನಮ್ಮ ದೇಶದಲ್ಲಿ ಏನು ನಡೆಯುತ್ತಿದೆಯೋ, ಅದನ್ನೇ ಅವರು ಮಾಡಹೊರಟಿದ್ದಾರೆ. ಪ್ರಬಲ ವ್ಯಕ್ತಿಗಳು ದ್ವೇಷ ಮತ್ತು ವಿಭಜನೆಯನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಹಾಗೂ ಈ ಆಟದಲ್ಲಿ ನಮ್ಮನ್ನು ತೊಡಗಿಸಲು ಅವರು ಮುಂದಾಗುವಾಗ ಅದು ನಮಗೆ ಗೊತ್ತಾಗಬೇಕು’’ ಎಂದು ಕಮಲಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News