ಆಸ್ಟ್ರೇಲಿಯಕ್ಕೆ ಮರಳಿದ ಬಹರೈನ್ ಫುಟ್ಬಾಲಿಗ

Update: 2019-02-12 14:54 GMT

ಮೆಲ್ಬರ್ನ್, ಫೆ. 12: ಬಹರೈನ್‌ ನಿಂದ ಪಲಾಯನಗೈದು ಆಸ್ಟ್ರೇಲಿಯದಲ್ಲಿ ಆಶ್ರಯ ಪಡೆದಿರುವ ಫುಟ್ಬಾಲಿಗ ಹಕೀಮ್ ಅಲ್-ಅರೈಬಿ, ಥಾಯ್ಲೆಂಡ್‌ನಲ್ಲಿ ಎರಡೂವರೆ ತಿಂಗಳ ಬಂಧನದ ಬಳಿಕ ಮಂಗಳವಾರ ಆಸ್ಟ್ರೇಲಿಯಕ್ಕೆ ಮರಳಿದ್ದಾರೆ.

ಥಾಯ್ಲೆಂಡ್ ‌ನ ಜೈಲಿನಲ್ಲಿದ್ದ ಅವರು ಬಹರೈನ್‌ ಗೆ ಗಡಿಪಾರಾಗುವ ಬೆದರಿಕೆಯನ್ನು ಎದುರಿಸುತ್ತಿದ್ದರು.

25 ವರ್ಷದ ಫುಟ್ಬಾಲಿಗ ಮೆಲ್ಬರ್ನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ‘ಸೇವ್ ‌ಹಕೀಮ್’ ಟಿ-ಶರ್ಟ್ ಧರಿಸಿದ ಅವರ ಸ್ನೇಹಿತರು, ‘ಯು ವಿಲ್ ನೆವರ್ ವಾಕ್ ಅಲೋನ್’ ಎಂಬ ಫುಟ್ಬಾಲ್ ಗೀತೆಯನ್ನು ಹಾಡುತ್ತಾ ಸ್ವಾಗತಿಸಿದರು.

‘‘ನಾನು ಆಸ್ಟ್ರೇಲಿಯಕ್ಕೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ’’ ಎಂದು ನಗುತ್ತಾ ಹೇಳಿದ ಅರೈಬಿ, ‘‘ಇದು ನನ್ನ ದೇಶ’’ ಎಂದರು.

‘‘ನನಗೆ ಇನ್ನೂ ಪೌರತ್ವ ಸಿಕ್ಕಿಲ್ಲ. ಆದರೆ, ನನ್ನ ದೇಶ ಆಸ್ಟ್ರೇಲಿಯ. ನಾನು ಆಸ್ಟ್ರೇಲಿಯದಲ್ಲೇ ಸಾಯುತ್ತೇನೆ, ಆಸ್ಟ್ರೇಲಿಯವನ್ನು ಪ್ರೀತಿಸುತ್ತೇನೆ’’ ಎಂದರು.

ಬಹರೈನ್ ಪ್ರಜೆಯಾಗಿರುವ ಅರೈಬಿ, 2011ರ ಅರಬ್ ಬಂಡಾಯಕ್ಕೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಕ್ಕೆ ಪರಾರಿಯಾಗಿದ್ದರು. ಅಲ್ಲಿ ಸ್ಥಳೀಯ ಫುಟ್ಬಾಲ್ ಕ್ಲಬ್ ಒಂದರ ಪರವಾಗಿ ಆಡುತ್ತಿದ್ದರು.

ನವೆಂಬರ್ 27ರಂದು ಹನಿಮೂನ್‌ಗಾಗಿ ಥಾಯ್ಲೆಂಡ್‌ಗೆ ಹೋಗಿದ್ದಾಗ ಬಹರೈನ್‌ನ ಕೋರಿಕೆ ಮೇರೆಗೆ ಥಾಯ್ಲೆಂಡ್ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.

ಅವರ ಪ್ರಕರಣ ಸುದ್ದಿಯಾಗಿ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದಾಗ ಅವರ ಗಡಿಪಾರು ಕೋರಿಕೆಯಿಂದ ಬಹರೈನ್ ಹಿಂದಕ್ಕೆ ಸರಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News