ಮೆಕ್ಸಿಕೊ ಗೋಡೆಗೆ 1.375 ಬಿಲಿಯ ಡಾಲರ್: ಸೆನೆಟರ್‌ಗಳ ಘೋಷಣೆ

Update: 2019-02-12 15:06 GMT

ವಾಶಿಂಗ್ಟನ್, ಫೆ. 12: ಈ ವಾರದ ಕೊನೆಯಲ್ಲಿ ಮತ್ತೊಮ್ಮೆ ಸರಕಾರ ಬಂದ್ ಆಗುವುದನ್ನು ತಪ್ಪಿಸಲು ಅಮೆರಿಕದ ಸಂಸದರು ತಾತ್ವಿಕವಾಗಿ ಒಪ್ಪಂದವೊಂದಕ್ಕೆ ಬಂದಿದ್ದಾರೆ ಎಂದು ಸೆನೆಟರ್‌ಗಳು ಸೋಮವಾರ ಪ್ರಕಟಿಸಿದ್ದಾರೆ.

ಈ ಒಪ್ಪಂದದಲ್ಲಿ ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟಲು 1.375 ಬಿಲಿಯ ಡಾಲರ್ (ಸುಮಾರು 9,700 ಕೋಟಿ ರೂಪಾಯಿ) ಇಡಲಾಗಿದೆ ಎನ್ನಲಾಗಿದೆ.

‘‘ಆಂತರಿಕ ಭದ್ರತೆ ಮತ್ತು ಇತರ ಆರು ಮಸೂದೆಗಳ ಬಗ್ಗೆ ನಮ್ಮ ನಡುವೆ ತಾತ್ವಿಕ ಒಪ್ಪಂದವೊಂದು ಏರ್ಪಟ್ಟಿದೆ’’ ಎಂದು ರಿಪಬ್ಲಿಕನ್ ಪಕ್ಷದ ಪ್ರಮುಖ ಸಂಧಾನಕಾರ ರಿಚರ್ಡ್ ಶೆಲ್ಬಿ ಸುದ್ದಿಗಾರರಿಗೆ ತಿಳಿಸಿದರು.

ಅಮೆರಿಕ-ಮೆಕ್ಸಿಕೊ ಗಡಿಯುದ್ದಕ್ಕೂ ಗೋಡೆ ಕಟ್ಟಲು 1.375 ಬಿಲಿಯ ಡಾಲರ್ ಮೊತ್ತವನ್ನು ಒಪ್ಪಂದ ಒಳಗೊಂಡಿದೆ ಎಂಬುದಾಗಿ ಸಂಸತ್ತು ಕಾಂಗ್ರೆಸ್‌ನ ಹಿರಿಯ ಸದಸ್ಯರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಅಮೆರಿಕ-ಮೆಕ್ಸಿಕೊ ಗೋಡೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಮುಖ ಚುನಾವಣಾ ಭರವಸೆಯಾಗಿತ್ತು. ತನ್ನ ಈ ಪ್ರೀತಿಪಾತ್ರ ಯೋಜನೆಗೆ ಟ್ರಂಪ್ 5.7 ಬಿಲಿಯ ಡಾಲರ್ (ಸುಮಾರು 40,230 ಕೋಟಿ ರೂಪಾಯಿ) ಕೇಳಿದ್ದಾರೆ.

ಒಪ್ಪಂದದಲ್ಲಿ ನೀಡಲಾಗಿರುವ ಮೊತ್ತದಿಂದ ಸುಮಾರು 89 ಕಿಲೋಮೀಟರ್ ಉದ್ದದ ಗೋಡೆಯನ್ನು ಕಟ್ಟಬಹುದಾಗಿದೆ. ಈ ಗೋಡೆಯನ್ನು ದಕ್ಷಿಣ ಟೆಕ್ಸಾಸ್‌ನ ರಿಯೋ ಗ್ರಾಂಡ್ ವ್ಯಾಲಿ ಪ್ರದೇಶದಲ್ಲಿ ಕಟ್ಟಬೇಕಾಗಿದೆ.

ಆದರೆ, ಈ ಒಪ್ಪಂದಕ್ಕೆ ಶ್ವೇತಭವನದ ಅನುಮೋದನೆ ಇನ್ನಷ್ಟೇ ಸಿಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News