ಸೌದಿ ಯುವರಾಜನ ಭೇಟಿಗೆ ಮುನ್ನ ಪಾಕ್ ತಲುಪಿದ 5 ಟ್ರಕ್: ಏನಿವೆ ಗೊತ್ತಾ ಇದರಲ್ಲಿ?

Update: 2019-02-12 15:12 GMT

ಇಸ್ಲಾಮಾಬಾದ್, ಫೆ. 12: ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಅವರಿಗೆ ಸಂಬಂಧಿಸಿದ ವೈಯಕ್ತಿಕ ವಸ್ತುಗಳು ಇಸ್ಲಾಮಾಬಾದನ್ನು ತಲುಪಿವೆ.

ಸೌದಿ ಸಿಂಹಾಸನದ ಪ್ರಭಾವಿ ಉತ್ತರಾಧಿಕಾರಿ ಪಾಕಿಸ್ತಾನಕ್ಕೆ ಈ ವಾರ ಭೇಟಿ ನೀಡುವ ನಿರೀಕ್ಷೆಯಿದೆ. ಆದರೆ, ಭದ್ರತೆಯ ಕಾರಣಗಳಿಗಾಗಿ ಅವರ ಭೇಟಿಯ ನಿಖರ ದಿನಾಂಕವನ್ನು ಬಹಿರಂಗಗೊಳಿಸಲಾಗಿಲ್ಲ.

ಯುವರಾಜನ ವ್ಯಾಯಾಮ ಸಲಕರಣೆಗಳು ಮತ್ತು ಪೀಠೋಪಕರಣಗಳು ಸೇರಿದಂತೆ ಅವರಿಗೆ ಸೇರಿದ ವಸ್ತುಗಳು 5 ಟ್ರಕ್‌ಗಳಲ್ಲಿ ಇಸ್ಲಾಮಾಬಾದ್ ತಲುಪಿವೆ ಎಂದು ಸೌದಿ ರಾಯಭಾರ ಕಚೇರಿಗಳನ್ನು ಉಲ್ಲೇಖಿಸಿ ‘ಡಾನ್ ನ್ಯೂಸ್’ ವರದಿ ಮಾಡಿದೆ.

ಅವರ ಭದ್ರತಾ ತಂಡ ಮತ್ತು ಸೌದಿ ಮಾಧ್ಯಮಗಳೂ ಪಾಕಿಸ್ತಾನದ ರಾಜಧಾನಿ ತಲುಪಿವೆ.

ಇದು ಸೌದಿ ಯುವರಾಜನಾಗಿ ಅವರು ಪಾಕಿಸ್ತಾನಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಅವರು ಈ ಮೊದಲು, ಯೆಮನ್ ಸಂಘರ್ಷದ ಆರಂಭದಲ್ಲಿ ರಕ್ಷಣಾ ಸಚಿವನಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.

ಸಲ್ಮಾನ್ ಪಾಕಿಸ್ತಾನದ ಪ್ರಧಾನಿಯ ನಿವಾಸದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅವರ ಸಿಬ್ಬಂದಿಗಾಗಿ ಇಸ್ಲಾಮಾಬಾದ್‌ನ ಎರಡು ದುಬಾರಿ ಹೊಟೇಲ್‌ಗಳನ್ನು ಸಂಪೂರ್ಣವಾಗಿ ಮೀಸಲಿಡಲಾಗಿದೆ. ಇನ್ನೆರಡು ಹೊಟೇಲ್‌ಗಳನ್ನು ಆಂಶಿಕವಾಗಿ ಕಾದಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News