ಬಿಜೆಪಿಯ ಕ್ಯಾಂಪಸ್ ರಾಜಕೀಯಕ್ಕೆ ಸಡ್ಡುಹೊಡೆದ ಗುಜರಾತ್ ನ ಮತ್ತೊಬ್ಬ ಶಾ!
ಅಹ್ಮದಾಬಾದ್ ನಗರದ ಎಚ್ ಕೆ ಆರ್ಟ್ಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಸಕ ಜಿಗ್ನೇಶ್ ಮೆವಾನಿ ಅವರಿಗೆ ಆಡಳಿತ ಮಂಡಳಿ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ನೈತಿಕ ತಳಹದಿಯ ಮೇಲೆ ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಶಾ ಅವರ ನಿರ್ಧಾರವನ್ನು ವಿದ್ಯಾರ್ಥಿಗಳ ಸಹಿತ ಹಲವರು ಶ್ಲಾಘಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾನು ರಾಜೀನಾಮೆ ನೀಡಿದ್ದೇಕೆ ಎನ್ನುವ ಬಗ್ಗೆ ಉಸ್ತುವಾರಿ ಪ್ರಾಂಶುಪಾಲ ಹಾಗೂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹೇಮಂತ್ ಕುಮಾರ್ ಶಾ ಬರೆದಿರುವ ಪತ್ರ ಈ ಕೆಳಗಿದೆ.
.....................................................
ಎಚ್‍ಕೆ ಆರ್ಟ್ಸ್ ಕಾಲೇಜಿನ ವಾರ್ಷಿಕ ದಿನಾಚರಣೆ ಸೋಮವಾರ ನಡೆಯಲಿತ್ತು. ಕೆಲ ದಿನಗಳ ಹಿಂದೆಯಷ್ಟೇ ಜಿಗ್ನೇಶ್ ಮೆವಾನಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ಕಾಲೇಜು ಅವರು ಕಲಿತ ಸಂಸ್ಥೆಯಾಗಿತ್ತು. ಆದರೂ ಬಿಜೆಪಿಯ ಕೆಲ ಯುವ ನಾಯಕರು ನನ್ನನ್ನು, ಉಪ ಪ್ರಾಂಶುಪಾಲ (ಮೋಹನಭಾಯಿ ಪರ್ಮಾರ್) ಹಾಗೂ ಟ್ರಸ್ಟಿಗಳ ಮಂಡಳಿಯನ್ನು ಬೆದರಿಸಲಾರಂಭಿಸಿದ್ದರು.
ಉಪ ಪ್ರಾಂಶುಪಾಲರು ಮತ್ತು ನಾನು ಸೋಮವಾರ ನಮ್ಮ ರಾಜೀನಾಮೆ ಸಲ್ಲಿಸಿದೆವು. ಜಿಗ್ನೇಶ್ ಮೇವಾನಿ ಭಾಗವಹಿಸಿದರೆ ಕಾರ್ಯಕ್ರಮ ನಡೆಸಲು ಬಿಡಲಾಗುವುದಿಲ್ಲ ಎಂದು ಬಿಜೆಪಿ ಸಂಯೋಜಿತ ವಿದ್ಯಾರ್ಥಿ ಸಂಘಟನೆಯ ನಾಯಕರು ಒಡ್ಡಿದ ಬೆದರಿಕೆಗೆ ಟ್ರಸ್ಟ್ ತಲೆ ಬಾಗಿತ್ತು. ಪೊಲೀಸರ ರಕ್ಷಣೆಯಿದ್ದರೂ ತೊಂದರೆ ಸೃಷ್ಟಿಸುವುದಾಗಿ ಅವರು ಬೆದರಿಸಿದ್ದರು. ನಮ್ಮ ಟ್ರಸ್ಟ್ 750 ಜನರನ್ನು ಕೂರಿಸುವ ಸಾಮರ್ಥ್ಯವಿರುವ ನಮ್ಮ ಸಭಾಂಗಣದಲ್ಲಿ ಈ ಕಾರ್ಯಕ್ರಮಕ್ಕೆ ಅನುಮತಿಸದೇ ಇರಲು ನಿರ್ಧರಿಸಿತ್ತು. ಕಾರ್ಯಕ್ರಮ ರದ್ದು ಪಡಿಸುವುದರ ಹೊರತಾಗಿ ನಮಗೆ ಬೇರೆ ದಾರಿಯಿರಲೇ ಇಲ್ಲ. ಆದರೆ ಇದನ್ನು ಹಾಗೆಯೇ ಸುಮ್ಮನೆ ಬಿಡಲು ಸಾಧ್ಯವಿಲ್ಲ.
ನಾನೇನೋ ದೊಡ್ಡ ಸಾಧನೆ ಮಾಡಿದ್ದೇನೆಂದು ತೋರಿಸಿಕೊಳ್ಳಲು ರಾಜೀನಾಮೆ ನೀಡಿಲ್ಲ. ನನ್ನ ಸ್ಥಾನದಲ್ಲಿರುವ ಯಾರೇ ಆದರೂ ಮಾಡಬೇಕಾಗಿದ್ದು ಇದೇ ಎಂದು ಹಾಗೆ ಮಾಡಿದೆ. ಶಿಕ್ಷಣ ತಜ್ಞರ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಟ್ರಸ್ಟ್ ನಿರ್ಧಾರ ನೇರ ದಾಳಿಯಾಗಿದೆ.
ಇಂದು ವಾಟ್ಸ್ ಆ್ಯಪ್ ಮತ್ತು ಫೇಸ್ ಬುಕ್ ನಲ್ಲಿ ನನಗೆ ಹಲವಾರು ಬೆಂಬಲದ ಸಂದೇಶಗಳು ಬರುತ್ತಿವೆ. “ನೀವು ಒಳ್ಳೆಯ ಕೆಲಸ ಮಾಡಿದ್ದೀರಿ” ಎಂದು ಹಲವರು ಹೇಳಿದ್ದಾರೆ. ಇದೇನೂ ದೊಡ್ಡ ಕೆಲಸವಲ್ಲ, ಈ ಹುದ್ದೆಯನ್ನು ಹೊಂದಿರುವ ಎಲ್ಲರೂ ಮಾಡಬೇಕಾದ ಕೆಲಸವಿದು. ಇದು ಕೇವಲ ಒಬ್ಬ ವ್ಯಕ್ತಿ ಜಿಗ್ನೇಶ್ ಮೇವಾನಿಯ ಸ್ವಾತಂತ್ರ್ಯದ ಬಗ್ಗೆಯಲ್ಲ, ಬದಲಾಗಿ ವಿವಿಧ ಪರಿಕಲ್ಪನೆಗಳ ಸ್ವಾತಂತ್ರ್ಯದ ಜತೆಗೆ ನನ್ನ ಸ್ವಾತಂತ್ರ್ಯವನ್ನೂ ಹತ್ತಿಕ್ಕಲಾಗಿದೆ.
ಗಾಂಧೀವಾದದ ಬಗ್ಗೆ ಭಾಷಣ ನೀಡಲು ನಾಳೆ ನಾನು ಸೂರತ್ ಗೆ ಹೊಗುತ್ತಿದ್ದೇನೆ. ಶೈಕ್ಷಣಿಕ ಸಾಮರ್ಥ್ಯಗಳನ್ನು ಹೆಚ್ಚಿಸುವ ವಾತಾವರಣವನ್ನು ಈ ಘಟನೆ ಗುಜರಾತ್ ನಲ್ಲಿ ಸೃಷ್ಟಿಸಬಹುದು ಎಂದು ನಾನು ನಿರೀಕ್ಷಿಸುತ್ತೇನೆ.
ಕೆಲ ತಿಂಗಳುಗಳ ಹಿಂದೆ ಅಹ್ಮದಾಬಾದ್ ನ ಕರ್ಣಾವತಿ ವಿಶ್ವವಿದ್ಯಾಲಯವು ಅಮಿತ್ ಶಾ, ಸ್ಯಾಮ್ ಪಿತ್ರೋಡಾ, ಸುಬ್ರಮಣಿಯನ್ ಸ್ವಾಮಿ ಮತ್ತು ಹಲವು ರಾಜಕೀಯ ವ್ಯಕ್ತಿಗಳನ್ನು ಅಲ್ಲಿ ನಡೆದ ಯುವ ಸಂಸತ್ತಿಗೆ ಆಹ್ವಾನಿಸಿತ್ತು. ನಮ್ಮ ಕಾಲೇಜಿಗೆ ಅಮಿತ್ ಶಾರನ್ನು ಆಹ್ವಾನಿಸಿದರೂ ನನಗೆ ಆಕ್ಷೇಪವಿಲ್ಲ. ಆದರೆ ಅಮಿತ್ ಶಾ ಅವರನ್ನು ವಿವಿಯೊಂದರಲ್ಲಿ ಭಾಷಣ ನೀಡದಂತೆ ತಡೆಯದೇ ಇರುವಾಗ ವಡ್ಗಾಂ ಶಾಸಕರಿಗೆ ವೇದಿಕೆಯೊದಗಿಸುತ್ತಿಲ್ಲ ಏಕೆಎ?
ಹಿಂದೆ ನಮ್ಮ ಕಾಲೇಜು ಹಾಗೂ ಅಸೋಸಿಯೇಶನ್ ಆಫ್ ಇಂಡಿಯನ್ ಕಾಲೇಜ್ ಪ್ರಿನ್ಸಿಪಾಲ್ಸ್ ಆಯೋಜಿಸಿದ್ದ ಸಮ್ಮೇಳನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಗಳಾಗಿದ್ದರು. ಈ ಹಿಂದೆ ಮಾಯಾ ಕೊಡ್ನಾನಿ ಸಹಿತ ಹಲವು ಸಚಿವರನ್ನು ನಾವು ಆಹ್ವಾನಿಸಿದ್ದೇವೆ. ಈಗ ಏಕೆ ಇಂತಹ ಸಮಸ್ಯೆ?....
ಈ ರೀತಿಯ ಸ್ವಾತಂತ್ರ್ಯ ದಮನ, ಮುಖ್ಯವಾಗಿ ನಮ್ಮಂತಹ ಆರ್ಟ್ಸ್ ಕಾಲೇಜಿನಲ್ಲಿ ಒಂದು ಗಂಭೀರ ವಿಚಾರ. ಈ ಹಿಂದೆ ಕೆಲವು ಭಾಷಣಕಾರರಿಗೆ ಅನುಮತಿ ನಿರಾಕರಿಸಿ ವಿದ್ಯಾರ್ಥಿಗಳು ಹಿಂಸೆ ನಡೆಸಿದ ಉದಾಹರಣೆಗಳಿವೆ. (ರಾಮ್ಜಾಸ್ ನಲ್ಲಿ ಪ್ರೊಫೆಸರ್ ಮೇಲ್ ದಾಳಿ ನಡೆಸಲಾಗಿದ್ದರೆ, ಗುಜರಾತ್ ನಲ್ಲಿ ರಾಮ್ ಗುಹಾ ಅವರಂತಹ ವಿದ್ವಾಂಸರಿಗೂ ಆಹ್ವಾನ ನಿರಾಕರಿಸಲಾಗಿತ್ತು. ಅವರು ಈ ಫೆಬ್ರವರಿಯಲ್ಲಿ ಅಹ್ಮದಾಬಾದ್ ವಿವಿ ಸೇರಲಿದ್ದರು. ಆದರೆ ಎಬಿವಿಪಿಯ ಕೆಲವರು ಅವರ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಅವರ ನೇಮಕಾತಿ ವಾಪಸ್ ಪಡೆಯಲಾಯಿತು. ಕೆಲ ವಾರಗಳ ಹಿಂದೆ ನಯನತಾರಾ ಸೆಹಗಲ್ ಅವರಂತಹವರನ್ನೂ ಸಾಹಿತ್ಯ ಸಭೆಗಳಿಗೆ ಆಹ್ವಾನ ನೀಡಲಾಗಿರಲಿಲ್ಲ) ಇಂತಹ ವಾತಾವರಣದಲ್ಲಿ ಮಾನವೀಯತೆ ಹಾಗೂ ಆರೋಗ್ಯಕರ ಸಂವಾದಕ್ಕೆ ಆಸ್ಪದವಿಲ್ಲ.
ಇದು ಪ್ರಜಾಪ್ರಭುತ್ವದ ಕೊಲೆ, ರಾಜೀನಾಮೆ ನೀಡುವುದು ಸರಿಯಾದ ಕ್ರಮವಷ್ಟೇ ಆಗಿರಲಿಲ್ಲ ಪ್ರಾಂಶುಪಾಲನಾಗಿ ನಾನು ಕೈಗೊಳ್ಳಬಹುದಾದ ಏಕೈಕ ಕ್ರಮ ಅದಾಗಿತ್ತು.
ಹೇಮಂತ್ ಕುಮಾರ್ ಶಾ
ಕೃಪೆ: thewire.in