ಬಂಗಾಳ ಕೊಲ್ಲಿಯಲ್ಲಿ 4.9 ಪ್ರಮಾಣದ ಭೂಕಂಪ: ಚೆನ್ನೈಯಲ್ಲಿ ಭಯಭೀತರಾದ ನಾಗರಿಕರು
ಹೊಸದಿಲ್ಲಿ, ಫೆ. 12: ರಿಕ್ಟರ್ ಮಾಪಕದಲ್ಲಿ 4.9 ದಾಖಲಾದ ಭೂಕಂಪ ಮಂಗಳವಾರ ಬೆಳಗ್ಗೆ ಬಂಗಾಳ ಕೊಲ್ಲಿಗೆ ಅಪ್ಪಳಿಸಿದೆ ಎಂದು ಅಮೆರಿಕದ ಭೂಸರ್ವೇಕ್ಷಣೆ ಇಲಾಖೆ ತಿಳಿಸಿದೆ. ಉತ್ತರ ಅಂಡಮಾನ್ ಚೆನ್ನೈ ಹಾಗೂ ಪೋರ್ಟ್‌ಬ್ಲೇರ್‌ನಲ್ಲಿ ಲಘು ಕಂಪನದ ಅನುಭವವಾಗಿದೆ. ಚೆನ್ನೈ ಜನರು ಭೂಕಂಪದ ಬಗ್ಗೆ ವರದಿ ಮಾಡಲು ಸಾಮಾಜಿಕ ಜಾಲ ತಾಣ ಬಳಸಿದರು.
ಆದಾಗ್ಯೂ, ಯಾವುದೇ ಜೀವ ಹಾನಿ ಅಥವಾ ಸೊತ್ತು ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ.
ಭೂಕಂಪ ಸಮುದ್ರ ಮಟ್ಟದಿಂದ 10 ಕಿ.ಮೀ. ಆಳದಲ್ಲಿ ಕೇಂದ್ರವನ್ನು ಹೊಂದಿತ್ತು. ಚೆನ್ನೈಯಿಂದ 609 ಕಿ.ಮೀ ದೂರದಲ್ಲಿ ಮುಂಜಾನೆ 1.30ಕ್ಕೆ ಭೂಕಂಪ ಸಂಭವಿಸಿತು. ಈ ಹಿಂದೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಸುತ್ತಮುತ್ತಲಿನ ವಲಯದಲ್ಲಿ ಹೆಚ್ಚಿನ ಭೂಕಂಪ ಸಂಭವಿಸಿತ್ತು. ಚೆನ್ನೈನ ಟೈಡಲ್ ಪಾರ್ಕ್ ಸಮೀಪ ಭೂಕಂಪನದ ಅನುಭವ ಉಂಟಾದ ಬಗ್ಗೆ ಚೆನ್ನೈ ನಿವಾಸಿಗಳು ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಭೂಕಂಪ ಹಲವರ ಸಾವಿಗೆ ಕಾರಣವಾದ 2004ರ ಸುನಾಮಿ ಹಾಗೂ 2002ರ ಗುಜರಾತ್ ಭುಜ್ ಭೂಕಂಪನವನ್ನು ನೆನಪಿಸಿತು ಎಂದು ಚೆನ್ನೈನ ಓರ್ವ ನಿವಾಸಿ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.