ಗಡಿ ಸುರಕ್ಷತೆ ಒಪ್ಪಂದದಿಂದ ರೋಮಾಂಚನಗೊಂಡಿಲ್ಲ: ಟ್ರಂಪ್

Update: 2019-02-13 14:40 GMT

ವಾಶಿಂಗ್ಟನ್, ಫೆ. 13: ಉಭಯ ಪಕ್ಷಗಳ ಸಂಸದರ ಗುಂಪೊಂದು ಸಿದ್ಧಪಡಿಸಿರುವ ಗಡಿ ಭದ್ರತೆ ಒಪ್ಪಂದದಿಂದ ನನಗೇನೂ ರೋಮಾಂಚನವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಸರಕಾರ ಇನ್ನೊಮ್ಮೆ ಬಂದ್ ಆಗುವುದನ್ನು ತಪ್ಪಿಸುವುದಕ್ಕಾಗಿ ಈ ಒಪ್ಪಂದವನ್ನು ಅಂಗೀಕರಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ ಹಾಗೂ ತನ್ನ ಮಹತ್ವಾಕಾಂಕ್ಷೆಯ ಮೆಕ್ಸಿಕೊ ಗಡಿ ಗೋಡೆಗೆ ಹಣವನ್ನು ಸಂಸತ್ತು ಕಾಂಗ್ರೆಸ್ಸನ್ನು ಹೊರತುಪಡಿಸಿ ಇತರ ಮೂಲಗಳಿಂದ ಪಡೆಯುವುದಾಗಿ ಹೇಳಿದ್ದಾರೆ.

ಗಡಿ ಗೋಡೆಯ ವಿಷಯದಲ್ಲಿ ಸರಕಾರ ಇನ್ನೊಮ್ಮೆ ಸ್ಥಗಿತಗೊಳ್ಳುವುದನ್ನು ತಪ್ಪಿಸುವುದಕ್ಕಾಗಿ ದಕ್ಷಿಣದ ಗಡಿಯಲ್ಲಿ 88.5 ಕಿಲೋ ಮೀಟರ್ ಉದ್ದದ ಗೋಡೆ ಕಟ್ಟಲು ಹಾಗೂ ಇತರ ಗಡಿ ಸಂರಕ್ಷಣೆ ಕ್ರಮಗಳನ್ನು ತೆಗೆದುಕೊಳ್ಳಲು 1.375 ಬಿಲಿಯ ಡಾಲರ್ (ಸುಮಾರು 9,700 ಕೋಟಿ ರೂಪಾಯಿ) ನೀಡುವ ಒಪ್ಪಂದಕ್ಕೆ ಡೆಮಾಕ್ರಟ್ ಮತ್ತು ರಿಪಬ್ಲಿಕನ್ ಸಂಸದರ ಗುಂಪು ಬಂದಿದೆ.

ಗಡಿ ಗೋಡೆಗೆ 5.7 ಬಿಲಿಯ ಡಾಲರ್ (40,230 ಕೋಟಿ ರೂಪಾಯಿ) ನೀಡಬೇಕೆಂದು ಟ್ರಂಪ್ ಸಂಸತ್ತನ್ನು ಕೇಳಿದ್ದರು. ಆದರೆ, ಇದಕ್ಕೆ ಸಂಸತ್ತಿನ ಪ್ರತಿಪಕ್ಷ ಡೆಮಾಕ್ರಟ್ ಸಂಸದರು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತೀಕಾರವಾಗಿ, ಸರಕಾರ ನಡೆಯಲು ಬೇಕಾದ ಹಣವನ್ನು ಒದಗಿಸುವ ಮಸೂದೆಗೆ ಸಹಿ ಹಾಕಲು ಟ್ರಂಪ್ ನಿರಾಕರಿಸಿದರು. ಹಾಗಾಗಿ, ಕಳೆದ ವರ್ಷದ ಕೊನೆಯಲ್ಲಿ ಆರಂಭಗೊಂಡ ಸರಕಾರ ಬಂದ್ 35 ದಿನಗಳ ಕಾಲ ಸಾಗಿ ಈ ವರ್ಷದ ಆರಂಭದಲ್ಲಿ ಕೊನೆಗೊಂಡಿದೆ.

‘‘ಗಡಿ ಭದ್ರತೆಗಾಗಿ ವಿವಿಧ ಮೂಲಗಳಿಂದ 23 ಬಿಲಿಯ ಡಾಲರ್ (1.63 ಲಕ್ಷ ಕೋಟಿ ರೂಪಾಯಿ) ಮೊತ್ತವನ್ನು ಪಡೆಯಲಿದ್ದೇನೆ. ಹಣದ ವಿಷಯ ಏನಿದ್ದರೂ, ನಾವು ಹೇಳಿದಂತೆಯೇ ಗೋಡೆಯನ್ನು ಕಟ್ಟುತ್ತೇವೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News