ಕಪ್ಪು ಹಣ ಬಿಳುಪು ಹಗರಣ: 3 ಭಾರತೀಯರು ದೋಷಿ

Update: 2019-02-13 14:50 GMT

ನ್ಯೂಯಾರ್ಕ್, ಫೆ. 13: ಬಹುಕೋಟಿ ಡಾಲರ್ ಕಪ್ಪು ಹಣ ಬಿಳುಪು ಹಗರಣಕ್ಕೆ ಸಂಬಂಧಿಸಿ ಮೂವರು ಭಾರತೀಯ ಅಮೆರಿಕನ್ನರು ಸೇರಿದಂತೆ ಆರು ಮಂದಿಯ ಆರೋಪ ಸಾಬೀತಾಗಿದೆ ಎಂದು ಅಮೆರಿಕದ ಕಾನೂನು ಇಲಾಖೆ ಹೇಳಿದೆ.

ಐದು ವಾರಗಳ ವಿಚಾರಣೆಯ ಬಳಿಕ, ನ್ಯಾಯ ಮಂಡಳಿಯೊಂದರಲ್ಲಿ ಆರೋಪಿಗಳ ಆರೋಪ ಸಾಬೀತಾಗಿದೆ. ಟೆಕ್ಸಾಸ್‌ನ ಲಾರೆಡೊ ನಿವಾಸಿಗಳಾದ ರವೀಂದ್ರ ರೆಡ್ಡಿ ಗುಡಿಪಟಿ (61), ಹರ್ಷ ಜಗ್ಗಿ (54) ಮತ್ತು ನೀರು ಜಗ್ಗಿ (51) ಅಪರಾಧ ಸಾಬೀತಾದ ಭಾರತೀಯ ಮೂಲದವರು.

ಕಪ್ಪು ಹಣ ಬಿಳುಪು ಹಗರಣದ ಮೂಲಕ ಅಮೆರಿಕದಲ್ಲಿ ಮಾದಕ ದ್ರವ್ಯವನ್ನು ಮಾರಿ ಬಂದ ಹಣವನ್ನು ಲಾರೆಡೊದಲ್ಲಿ ವಿವಿಧ ಉದ್ಯಮಗಳ ಮೂಲಕ ಬಿಳುಪಾಗಿಸಿ ಮೆಕ್ಸಿಕೊದ ಮಾದಕ ದ್ರವ್ಯ ಪೂರೈಕೆದಾರರಿಗೆ ಕಳುಹಿಸಲಾಗುತ್ತಿತ್ತು.

2011 ಮತ್ತು 2013ರ ನಡುವಿನ ಅವಧಿಯಲ್ಲಿ, ಅಮೆರಿಕದಾದ್ಯಂತ ಮಾದಕ ದ್ರವ್ಯವನ್ನು ಮಾರಿ ಬಂದ ಕೋಟಿಗಟ್ಟಳೆ ಡಾಲರ್ ಹಣವನ್ನು ಟೆಕ್ಸಾಸ್‌ನಲ್ಲಿರುವ ಲಾರೆಡೊಗೆ ಕಳುಹಿಸಲು ಆರೋಪಿಗಳು ನೆರವಾಗಿದ್ದರು ಎಂದು ನ್ಯಾಯಾಲಯದಲ್ಲಿ ಮಂಡಿಸಲಾದ ಪುರಾವೆಗಳು ಹೇಳುತ್ತವೆ.

ಅಮೆರಿಕನ್ ಕರೆನ್ಸಿಯನ್ನು ಕಾರುಗಳು, ವಾಣಿಜ್ಯ ಬಸ್‌ಗಳು, ವಾಣಿಜ್ಯ ವಿಮಾನಗಳು ಮತ್ತು ಒಂದು ಖಾಸಗಿ ವಿಮಾನದ ಮೂಲಕ ರಾಶಿ ರಾಶಿಯಾಗಿ ಸಾಗಿಸಲಾಗುತ್ತಿತ್ತು. ಸೀಲ್ ಮಾಡಲಾದ ಹಾಗೂ ರಬ್ಬರ್ ಬ್ಯಾಂಡ್ ಹಾಕಿದ ಕರೆನ್ಸಿ ಬಂಡಲ್‌ಗಳನ್ನು ಪ್ಲಾಸ್ಟಿಕ್ ಚೀಲಗಳು, ಬಟ್ಟೆ ಚೀಲಗಳು, ಸೂಟ್‌ಕೇಸ್‌ಗಳು, ಬೆನ್ನಿಗೆ ಹಾಕಿಕೊಳ್ಳುವ ಚೀಲಗಳು ಮತ್ತು ಧಾನ್ಯ ಪೊಟ್ಟಣಗಳಲ್ಲಿ ಸಾಗಿಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News