ಅಮೆರಿಕದ ದಿಗ್ಬಂಧನ: ವೆನೆಝುವೆಲದ ತೈಲ ರಫ್ತಿನಲ್ಲಿ ಕುಸಿತ

Update: 2019-02-13 14:53 GMT

ಕ್ಯಾರಕಸ್ (ವೆನೆಝುವೆಲ), ಫೆ. 13: ಅಮೆರಿಕದ ಹೊಸ ಆರ್ಥಿಕ ದಿಗ್ಬಂಧನಗಳು ಜನವರಿ 28ರಂದು ಜಾರಿಗೆ ಬಂದ ಬಳಿಕ, ವೆನೆಝುವೆಲದ ತೈಲ ರಫ್ತಿನಲ್ಲಿ ಕುಸಿತವಾಗಿದೆ ಹಾಗೂ ಅದು ಭಾರತದತ್ತ ತಿರುಗಿದೆ. ಹಣ ಪಾವತಿ ನಿರ್ಬಂಧಗಳ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಯುರೋಪ್‌ಗೆ ಮಾಡಬೇಕಾಗಿರುವ ತೈಲ ಪೂರೈಕೆಗಳನ್ನು ಬೇರೆ ಕಡೆಗೆ ತಿರುಗಿಸುವ ಬಗ್ಗೆ ವೆನೆಝುವೆಲದ ಸರಕಾರಿ ತೈಲ ಕಂಪೆನಿ ಪಿಡಿವಿಎಸ್‌ಎ ಯೋಚಿಸುತ್ತಿದೆ.

ವೆನೆಝುವೆಲವು ತನ್ನ ಗಮನವನ್ನು ನಗದು ಹಣ ನೀಡುವ ಖರೀದಿದಾರರ, ಅದರಲ್ಲೂ ವಿಶೇಷವಾಗಿ ಭಾರತದ ಖರೀದಿದಾರರ ಮೇಲೆ ಹರಿಸಿದೆ. ಅಮೆರಿಕದ ಬಳಿಕ ಭಾರತವು ವೆನೆಝುವೆಲದ ಎರಡನೇ ಅತಿ ದೊಡ್ಡ ತೈಲ ಆಮದು ದೇಶವಾಗಿದೆ.

ವೆನೆಝುವೆಲದ ಅಧ್ಯಕ್ಷ ನಿಕೊಲಸ್ ಮಡುರೊ ಅಧಿಕಾರದಲ್ಲಿ ಉಳಿಯಲು ನೆರವಾಗಿರುವ ತೈಲ ಆದಾಯ ಅವರಿಗೆ ತಲುಪದಂತೆ ನೋಡಿಕೊಳ್ಳುವುದಕ್ಕಾಗಿ ಅಮೆರಿಕವು ಆ ದೇಶದ ಮೇಲೆ ಹೊಸ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ವೆನೆಝುವೆಲದ ಕಚ್ಚಾ ತೈಲ ಹೊತ್ತ ಎರಡು ಸೂಪರ್‌ ಟ್ಯಾಂಕರ್‌ಗಳು ಸೋಮವಾರ ರಾತ್ರಿ ವೆನೆಝುವೆಲದ ಜೋಸ್ ಬಂದರಿನಿಂದ ಭಾರತದತ್ತ ಹೊರಟಿವೆ.

ಕಚ್ಚಾ ತೈಲ ಮತ್ತು ಇತರ ಇಂಧನವನ್ನು ಹೊತ್ತ ಇತರ ಹಲವಾರು ಟ್ಯಾಂಕರ್‌ ಗಳು ಏಶ್ಯದತ್ತ ಹೊರಟಿರುವುದನ್ನು ಹಡಗು ನಿಗಾ ದತ್ತಾಂಶಗಳು ತೋರಿಸಿವೆ. ಆದಾಗ್ಯೂ, ಈ ಹಡಗುಗಳ ಅಂತಿಮ ತಾಣ ಯಾವುದು ಎನ್ನುವುದು ಸ್ಪಷ್ಟವಾಗಿಲ್ಲ.

ಆದರೆ, ಏಶ್ಯದಲ್ಲಿ ಗ್ರಾಹಕರನ್ನು ಪಡೆಯಲು ವೆನೆಝುವೆಲಗೆ ಕಷ್ಟವಾಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. ಯಾಕೆಂದರೆ, ಪಿಡಿವಿಎಸ್ ಎಯೊಂದಿಗೆ ವ್ಯವಹಾರ ಮಾಡಿಕೊಳ್ಳದಂತೆ ಈ ದೇಶಗಳ ಮೇಲೆ ಒತ್ತಡ ಹೇರುವ ಸಾಮರ್ಥ್ಯವನ್ನು ಅಮೆರಿಕ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News