ಉ.ಪ್ರದೇಶ: ದಲಿತ ವ್ಯಕ್ತಿಯ ವಿವಾಹ ದಿಬ್ಬಣಕ್ಕೆ ಬ್ರಾಹ್ಮಣರಿಂದ ಅಡ್ಡಿ

Update: 2019-02-13 16:33 GMT
ಸಾಂದರ್ಭಿಕ ಚಿತ್ರ

ಲಕ್ನೊ, ಫೆ.13: ಉತ್ತರಪ್ರದೇಶದ ಮಥುರಾ ಗ್ರಾಮದಲ್ಲಿ ಪ್ರಬಲವಾಗಿರುವ ಬ್ರಾಹ್ಮಣ ಸಮುದಾಯದವರು ದಲಿತ ಕುಟುಂಬದ ವ್ಯಕ್ತಿಯೊಬ್ಬನ ವಿವಾಹ ಮೆರವಣಿಗೆಗೆ ಅಡ್ಡಿ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರವಿವಾರ ರಾತ್ರಿ ಪೀರ್‌ಗಡಿ ಗ್ರಾಮದ ಮಹೇಶ್ ಕುಮಾರ್ ಎಂಬ ವರನ ಮದುವೆಯ ಮೆರವಣಿಗೆ ಮುಸುಮನ ಗ್ರಾಮದಲ್ಲಿರುವ ವಧುವಿನ ಮನೆಯತ್ತ ತೆರಳುತ್ತಿದ್ದಾಗ ಟ್ರಾಕ್ಟರ್ ಟ್ರಾಲಿಗಳನ್ನು ರಸ್ತೆಗೆ ಅಡ್ಡ ಇರಿಸಿ ತಡೆಯೊಡ್ಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಟ್ರಾಕ್ಟರ್ ಬ್ರಾಹ್ಮಣರ ಕುಟುಂಬವೊಂದಕ್ಕೆ ಸೇರಿದ್ದು ಅದನ್ನು ಸ್ಥಳಾಂತರಿಸಲು ಕೇಳಿಕೊಂಡಾಗ ಅವರು ನಿರಾಕರಿಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮದುಮಗಳ ಮಾವ ವೀರೇಂದ್ರ ಸಿಂಗ್ ಆರೋಪಿಸಿದ್ದಾರೆ. ಬಳಿಕ ಉತ್ತರಪ್ರದೇಶ ಪೊಲೀಸರ ಹೆಲ್ಪ್‌ಲೈನ್ ದೂರವಾಣಿಗೆ ಕರೆ ಮಾಡಿದಾಗ ಟ್ರಾಕ್ಟರ್ ತೆರವುಗೊಳಿಸಲಾಗಿದೆ. ಆದರೂ ಧ್ವನಿವರ್ಧಕದಲ್ಲಿ ಹಾಡು ನುಡಿಸದಂತೆ ಹಾಗೂ ದಿಬ್ಬಣದ ಬ್ಯಾಂಡ್‌ವಾದ್ಯ ನುಡಿಸದಂತೆ ತಡೆಯೊಡ್ಡಲಾಗಿದೆ ಎಂದವರು ತಿಳಿಸಿದ್ದಾರೆ. ಆದರೆ ಮದುವೆ ದಿಬ್ಬಣಕ್ಕೆ ತಡೆಯೊಡ್ಡಲಾಗಿಲ್ಲ. ಮಕ್ಕಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಕಾರಣ ಧ್ವನಿವರ್ಧಕದಲ್ಲಿ ಗಟ್ಟಿ ಧ್ವನಿಯಲ್ಲಿ ಸಂಗೀತ ಹಾಕುವುದಕ್ಕೆ ಬ್ರಾಹ್ಮಣರು ಆಕ್ಷೇಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News