ಮುನ್ನಡೆಯ ವಿಶ್ವಾಸದಲ್ಲಿ ವಿದರ್ಭ

Update: 2019-02-13 17:53 GMT

►ಅಕ್ಷಯ್ ವಾಡ್ಕರ್ ಅರ್ಧಶತಕ ವಿದರ್ಭ 245/6

ನಾಗ್ಪುರ, ಫೆ.13: ಇರಾನಿ ಕಪ್‌ನ ಎರಡನೇ ದಿನವಾದ ಬುಧವಾರ ರಣಜಿ ಚಾಂಪಿಯನ್ ವಿದರ್ಭ ತನ್ನ ಮೊದಲ ಇನಿಂಗ್ಸ್‌ನಲ್ಲಿ 245ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಇನಿಂಗ್ಸ್ ಮುನ್ನಡೆಯ ವಿಶ್ವಾಸದಲ್ಲಿದೆ. ಶೇಷ ಭಾರತದ ಮೊದಲ ಇನಿಂಗ್ಸ್ ಮೊತ್ತ 330ಕ್ಕೆ ಉತ್ತರಿಸಹೊರಟಿರುವ ವಿದರ್ಭ 2ನೇ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿ ಇನ್ನೂ 85 ರನ್ ಹಿನ್ನಡೆಯಲ್ಲಿದೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅಕ್ಷಯ್ ವಾಡ್ಕರ್ ಔಟಾಗದೆ 50 ರನ್(96 ಎಸೆತ, 9 ಬೌಂಡರಿ)ಗಳಿಸಿ ಹೋರಾಟ ಮುಂದುವರಿಸಿರುವ ಕಾರಣ ಪಂದ್ಯ ಈಗಲೂ ಸಮತೋಲನದಲ್ಲಿದೆ. ಆದರೆ, ವೇಗದ ಬೌಲರ್ ಅಂಕಿತ್ ರಾಜ್‌ಪೂತ್ ದಿನದಾಟದಂತ್ಯದಲ್ಲಿ ಆಲ್‌ರೌಂಡರ್ ಆದಿತ್ಯ ಸರ್ವಾಟೆ(18) ವಿಕೆಟನ್ನು ಉರುಳಿಸಿ ಶೇಷ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟಿದ್ದಾರೆ.

ಶೇಷ ಭಾರತದ ಸ್ಪಿನ್ನರ್‌ಗಳು ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿ ಎದುರಾಳಿ ತಂಡದ ರನ್‌ಗೆ ಕಡಿವಾಣ ಹಾಕಿದ್ದಾರೆ. ಕೆ.ಗೌತಮ್(2-33) ಹಾಗೂ ಧರ್ಮೇಂದ್ರ ಸಿನ್ಹಾ ಜಡೇಜ(2-66) ಪ್ರಮುಖ ಜೊತೆಯಾಟವನ್ನು ಮುರಿಯಲು ಸಫಲರಾಗಿದ್ದಾರೆ.

ವಿದರ್ಭ 2ನೇ ದಿನವಾದ ಬುಧವಾರ ಮೂರು 50 ಪ್ಲಸ್ ಜೊತೆಯಾಟ ನಡೆಸಿತು. ಆದರೆ, ರನ್‌ರೇಟ್ 2.72ರಷ್ಟಿತ್ತು. ಆರಂಭಿಕ ಆಟಗಾರ ಆರ್.ಸಂಜಯ್(65, 166 ಎಸೆತ, 9 ಬೌಂಡರಿ) ಹಾಗೂ ನಾಲ್ಕನೇ ಕ್ರಮಾಂಕದ ದಾಂಡಿಗಗಣೇಶ್ ಸತೀಶ್(48) ಮೊದಲ ಹಾಗೂ ಎರಡನೇ ಅವಧಿಯಲ್ಲಿ ವಿದರ್ಭ ಇನಿಂಗ್ಸ್‌ಗೆ ಬಲ ನೀಡಿದರು. ಈ ಇಬ್ಬರು ಔಟಾದ ಬಳಿಕ ವಿದರ್ಭ ಹಿನ್ನಡೆ ಅನುಭವಿಸಿತು.

ಮೊದಲ ದಿನವೇ ಶೇಷ ಭಾರತವನ್ನು 330 ರನ್‌ಗೆ ಆಲೌಟ್ ಮಾಡಿದ್ದ ವಿದರ್ಭ ಇಂದು ತನ್ನ ಮೊದಲ ಇನಿಂಗ್ಸ್ ಆರಂಭಿಸಿತು. ನಾಯಕ ಫೈಝ್ ಫಝಲ್(27) ಹಾಗೂ ಸಂಜಯ್ ಮೊದಲ ವಿಕೆಟ್‌ಗೆ 50 ರನ್ ಜೊತೆಯಾಟ ನಡೆಸಿ ಎಚ್ಚರಿಕೆಯ ಅರಂಭ ನೀಡಿದರು. ರಾಜ್‌ಪೂತ್ ಹಾಗೂ ತನ್ವೀರ್-ವುಲ್ ಹಕ್ ವಿದರ್ಭ ರನ್ ಗಳಿಕೆಗೆ ತೊಡಕಾದರು. ಫಝಲ್ ವಿಕೆಟನ್ನು ಉರುಳಿಸಿದ ಗೌತಮ್ ವಿದರ್ಭದ ಮೊದಲ ವಿಕೆಟ್ ಜೊತೆಯಾಟವನ್ನು ಮುರಿದರು. ಗಾಯಗೊಂಡಿರುವ ವಸೀಂ ಜಾಫರ್ ಬದಲಿಗೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಥರ್ವ ಟೈಡ್ ಕೇವಲ 15 ರನ್ ಗಳಿಸಿ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.

ಆಗ ಸಂಜಯ್ ಅವರೊಂದಿಗೆ ಕೈಜೋಡಿಸಿದ ಸತೀಶ್ 3ನೇ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿದರು. ಕರ್ನಾಟಕದ ಸತೀಶ್ ಸ್ಪಿನ್ನರ್‌ಗಳೆದುರು ಚೆನ್ನಾಗಿ ಆಡಿದರು. 166 ಎಸೆತಗಳಲ್ಲಿ 65 ರನ್ ಗಳಿಸಿದ್ದ ಸಂಜಯ್ ವಿಕೆಟ್ ಕಬಳಿಸಿದ ಜಡೇಜ ಶೇಷ ಭಾರತಕ್ಕೆ ಮೇಲುಗೈ ಒದಗಿಸಿದರು. ಮೋಹಿತ್ ಕಾಳೆ(1)ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಕಾಳೆ ವಿಕೆಟನ್ನು ಪಡೆದ ಗೌತಮ್ ಫೀಲ್ಡಿಂಗ್ ಮಾಡುತ್ತಿದ್ದಾಗ ಭುಜನೋವಿಗೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ ಘಟನೆಯೂ ನಡೆಯಿತು.

ಸತೀಶ್ ಅರ್ಧಶತಕದ ಅಂಚಿನಲ್ಲಿದ್ದಾಗ ಧರ್ಮೇಂದ್ರ ಜಡೇಜ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಆಗ ವಿದರ್ಭದ ಸ್ಕೋರ್ 168ಕ್ಕೆ 5. ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ 102 ರನ್ ಹಾಗೂ ರಣಜಿ ಟ್ರೋಫಿ ಫೈನಲ್‌ನಲ್ಲಿ ಉಪಯುಕ್ತ 49 ರನ್ ಗಳಿಸಿದ್ದ ಆಲ್‌ರೌಂಡರ್ ಆದಿತ್ಯ ಸರ್ವಾಟೆ ಅವರು ವಾಡ್ಕರ್‌ರೊಂದಿಗೆ ಕೈಜೋಡಿಸಿ ಇನಿಂಗ್ಸ್ ಬೆಳೆಸಿದರು. ಈ ಜೋಡಿ 6ನೇ ವಿಕೆಟ್‌ಗೆ 58 ರನ್ ಜೊತೆಯಾಟದಲ್ಲಿ ಭಾಗಿಯಾಯಿತು. ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು. 48 ಎಸೆತಗಳಲ್ಲಿ 18 ರನ್ ಗಳಿಸಿದ್ದ ಸರ್ವಾಟೆ ದಿನದಾಟ ಕೊನೆಗೊಳ್ಳಲು 10 ನಿಮಿಷ ಬಾಕಿ ಇರುವಾಗ ರಾಜ್‌ಪೂತ್‌ಗೆ ವಿಕೆಟ್ ಒಪ್ಪಿಸಿದರು.

ವಾಡ್ಕರ್ ಆರನೇ ಅರ್ಧಶತಕ(50) ಪೂರೈಸಿ 8ನೇ ಕ್ರಮಾಂಕದ ಆಟಗಾರ ಅಕ್ಷಯ್ ಕರ್ನೆವಾರ್‌ರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಕ್ಷಯ್ ತಾನೆದುರಿಸಿದ ಮೊದಲ 5 ಎಸೆತಗಳಲ್ಲಿ ಮೂರು ಬೌಂಡರಿ ಬಾರಿಸಿದರು. ಆಗ ನಾಯಕ ರಹಾನೆ ರಕ್ಷಣಾತ್ಮಕ ಫೀಲ್ಡಿಂಗ್ ನಿಯೋಜಿಸಿದರು. ಅಕ್ಷಯ್ 2ನೇ ದಿನದಾಟದ ಅಂತ್ಯಕ್ಕೆ 15 ಎಸೆತಗಳಲ್ಲಿ 15 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News