ಭದ್ರತಾ ಸಿಬ್ಬಂದಿ ಮಹಿಳೆಯ ಪಾಸ್ ಪೋರ್ಟ್ ಹರಿದ ಆರೋಪ: ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕರು ಹೇಳಿದ್ದೇನು?

Update: 2019-02-14 07:02 GMT
ರುಬೀನಾರ ಪಾಸ್ ಪೋರ್ಟ್

ಮಂಗಳೂರು, ಫೆ.14: ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮಹಿಳೆಯೊಬ್ಬರ ಪಾಸ್ ಪೋರ್ಟನ್ನು ಹರಿದು ಹಾಕಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸುವಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಸಮ್ ಸೆಟ್ಟಿ ವೆಂಕಟೇಶ್ವರ ರಾವ್ ಆದೇಶಿಸಿದ್ದಾರೆ.

ಮಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ರುಬೀನಾ (28) ಎಂಬ ಮಹಿಳೆಯ ಪಾಸ್ ಪೋರ್ಟನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹರಿದು ಹಾಕಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ವೆಂಕಟೇಶ್ವರ ರಾವ್ ‘ವಾರ್ತಾ ಭಾರತಿ’ಯೊಂದಿಗೆ ಮಾತನಾಡಿ, "ನಾವು ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಿದ್ದು, ವಿಮಾನ ನಿಲ್ದಾಣ ಸಿಬ್ಬಂದಿ ವಿರುದ್ಧ ಮಾಡಿರುವ ಆರೋಪ ಸುಳ್ಳು" ಎಂದು ಹೇಳಿದ್ದಾರೆ.

“ಆರೋಪಗಳು ಸುಳ್ಳು ಎನ್ನುವುದು ಸಿಸಿಟಿವಿ ಫೂಟೇಜ್ ಗಳಿಂದ ಸ್ಪಷ್ಟವಾಗಿ ತಿಳಿದುಬಂದಿದೆ. ಪಾಸ್ ಪೋರ್ಟ್ ಗೆ ಹಾನಿಯಾದದ್ದು ಹೇಗೆಂದು ನನಗೆ ತಿಳಿದಿಲ್ಲ. ಆದರೆ ಪ್ರಯಾಣಿಕರು ಮಾಡಿದ ಆರೋಪ ಇದಕ್ಕೆ ಕಾರಣವಲ್ಲ” ಎಂದವರು ಹೇಳಿದರು.

ಈ ಬಗ್ಗೆ ಸದ್ಯದಲ್ಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕೃತ ಪ್ರಕಟನೆಯೊಂದನ್ನು ಹೊರಡಿಸಲಿದ್ದಾರೆ ಎಂದು ವೆಂಕಟೇಶ್ವರ ರಾವ್ ಮಾಹಿತಿ ನೀಡಿದರು. ದುಬೈಗೆ ತಲುಪಿದ ನಂತರ ರುಬೀನಾರ ಕುಟುಂಬ ಈ ಬಗ್ಗೆ ಅಬುಧಾಬಿ ರಾಯಭಾರ ಕಚೇರಿಯಲ್ಲಿ ಈ ಬಗ್ಗೆ ದೂರು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News