ಅಮೆರಿಕ ವೀಸಾ ಹಗರಣ : 19 ಭಾರತೀಯರ ಬಿಡುಗಡೆ

Update: 2019-02-14 16:49 GMT

ವಾಶಿಂಗ್ಟನ್, ಫೆ.14: ಅಮೆರಿಕದಲ್ಲಿ ನಕಲಿ ವಿವಿಯ ಪ್ರಕರಣದಲ್ಲಿ ಬಂಧಿತರಾಗಿರುವ 129 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳಿಗೆ ದೇಶದಿಂದ ತೆರಳಲು ಮಿಷಿಗನ್‌ನ ಸ್ಥಳೀಯ ನ್ಯಾಯಾಲಯ ಅನುಮತಿ ನೀಡಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಪೇ ಟು ಸ್ಟೇ’ ಹಗರಣದಲ್ಲಿ ವಿದ್ಯಾರ್ಥಿಗಳಿಗೆ ಆಮಿಷ ಒಡ್ಡಿ ನಕಲಿ ವಿವಿಯಲ್ಲಿ ಪ್ರವೇಶ ಪಡೆಯುವಂತೆ ಮಾಡಿ ವಂಚಿಸಿರುವ ಪ್ರಕರಣ ಇದಾಗಿದೆ. ತಮ್ಮ ಸ್ಟುಡೆಂಟ್ ವೀಸಾ ಸ್ಥಾನಮಾನವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕೆಲವು ವಿದೇಶದ ಪ್ರಜೆಗಳು ನಕಲಿ ಶಿಕ್ಷಣ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳುತ್ತಾರೆ . ಇದರಿಂದ ಅವರು ಅಮೆರಿಕದಲ್ಲಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಮೆರಿಕದ ಅಧಿಕಾರಿಗಳು ಹೇಳುತ್ತಾರೆ.

ಆರೋಪಿಗಳನ್ನು ‘ಹೊರಹಾಕುವ ಪ್ರಕ್ರಿಯೆ’ಯಲ್ಲಿ ಇರಿಸಿ ಅವರನ್ನು ಗಡೀಪಾರು ಮಾಡಲು ಗುರುತಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 19 ಭಾರತೀಯ, ಒಬ್ಬ ಫೆಲೆಸ್ತೀನ್ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಮೂವರು ಕಳೆದ ವಾರ ಅಮೆರಿಕದಿಂದ ತೆರಳಿದ್ದರೆ ಉಳಿದ 17 ವಿದ್ಯಾರ್ಥಿಗಳು ಫೆ.26ರ ಒಳಗೆ ಅಮೆರಿಕದಿಂದ ತೆರಳಲಿದ್ದಾರೆ. ಇನ್ನೂ 100 ವಿದ್ಯಾರ್ಥಿಗಳು ಅಮೆರಿಕದ ಸ್ಥಾನಬದ್ಧತೆ ಕೇಂದ್ರದಲ್ಲಿದ್ದು ಇವರೆಲ್ಲಾ ತೆಲುಗು ಭಾಷಿಕರಾಗಿದ್ದಾರೆ. ಇವರಲ್ಲಿ ಕೆಲವರಿಗೆ ಜಾಮೀನು ಮಂಜೂರಾಗಿದೆ ಎಂದು ಆಂಧ್ರಪ್ರದೇಶ ಅನಿವಾಸಿ ತೆಲುಗು ಸಮಾಜದ ಸಂಯೋಜಕ ಸಾಗರ್ ದೊಡ್ಡಪಣೇನಿ ತಿಳಿಸಿದ್ದಾರೆ.

ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಸೂಚಿಸಿದ ಕ್ರಮದಲ್ಲೇ ಇವರು ಸ್ವದೇಶಕ್ಕೆ ಮರಳಬೇಕಿದ್ದು ಈ ಪ್ರಕ್ರಿಯೆಗೆ ಅಗತ್ಯವಿರುವ ದಾಖಲೆಪತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ತಿಂಗಳಾಂತ್ಯದೊಳಗೆ ವಿದ್ಯಾರ್ಥಿಗಳ ಪ್ರಥಮ ತಂಡ ಭಾರತ ತಲುಪುವ ನಿರೀಕ್ಷೆಯಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News