ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಮೆಂಟ್: ಬಾಕ್ಸರ್ ಅಮಿತ್ ಕ್ವಾ. ಫೈನಲ್‌ಗೆ

Update: 2019-02-14 17:59 GMT

ಸೋಫಿಯಾ(ಬಲ್ಗೇರಿಯ),ಫೆ.14: ಇಲ್ಲಿ ಗುರುವಾರ ಆರಂಭವಾದ 70ನೇ ಆವೃತ್ತಿಯ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಾಂಘಾಲ್(49ಕೆಜಿ)ಮೊದಲ ಸುತ್ತಿನಲ್ಲಿ ಬೈ ಪಡೆದು ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿದ್ದಾರೆ.

ಟೂರ್ನಮೆಂಟ್‌ನಲ್ಲಿ ಸತತ ಎರಡನೇ ಚಿನ್ನದ ಪದಕದ ಬೇಟೆಯಲ್ಲಿರುವ ಅಮಿತ್ ರವಿವಾರ ನಡೆಯುವ ಅಂತಿಮ-8ರ ಪಂದ್ಯದಲ್ಲಿ ಉಕ್ರೇನ್‌ನ ನಝಾರ್ ಕುರೊಟ್ಚಿನ್‌ಸವಾಲು ಎದುರಿಸಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ನಮನ್ ತನ್ವರ್(91ಕೆಜಿ)ಪ್ರಿ-ಕ್ವಾರ್ಟರ್ ಫೈನಲ್‌ಗೆ ಬೈ ಪಡೆದಿದ್ದು, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಪೊಲೆಂಡ್‌ನ ಮಿಚಲ್ ಸೊಝಿಂಸ್ಕಿ ಅವರನ್ನು ಎದುರಿಸಲಿದ್ದಾರೆ.

ಮಹಿಳಾ ಬಾಕ್ಸರ್‌ಗಳ ಪೈಕಿ ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತೆ ಮೀನಾ ಕುಮಾರಿ ದೇವಿಗೆ(54ಕೆಜಿ)ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ನೀಡಲಾಗಿದೆ. ಗುರುವಾರ ನಡೆದ ಡ್ರಾ ಪ್ರಕ್ರಿಯೆಯಲ್ಲಿ ನೀರಜ್(60ಕೆಜಿ)ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಬೆನ್ನುನೋವಿನಿಂದ ಚೇತರಿಸಿಕೊಂಡು ಉನ್ನತ ಮಟ್ಟದ ಟೂರ್ನಿಗೆ ವಾಪಸಾಗಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ಗೌರವ್ ಬಿಧುರಿ(56 ಕೆಜಿ)ಶುಕ್ರವಾರ ಮೊದಲ ಸುತ್ತಿನಲ್ಲಿ ಸ್ಥಳೀಯ ಫೇವರಿಟ್ ಇಮಾನುವುಲ್ ಬೊಗೊವ್‌ರನ್ನು ಮುಖಾಮುಖಿ ಯಾಗಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಗೌರವ್ ಸೋಳಂಕಿ(52ಕೆಜಿ)ತನ್ನ ಮೊದಲ ಸುತ್ತಿನಲ್ಲಿ ಅಮೆರಿಕದ ಅಬ್ರಹಾಂ ಪೆರೆಝ್‌ರನ್ನು ಎದುರಿಸಲಿದ್ದಾರೆ.

ಮಹಿಳೆಯರ ಡ್ರಾನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸೋನಿಯಾ ಲಾಥರ್(57ಕೆಜಿ)ಮೊದಲ ಸುತ್ತಿನಲ್ಲಿ ಸರ್ಬಿಯದ ಜೆಲೆನಾ ಝೆಕಿಕ್‌ರನ್ನು, ಪಿಂಕಿ ರಾಣಿ(51ಕೆಜಿ)ಫಿಲಿಪಿನೊ ಐರಿಶ್ ಮಾಗ್ನೊರನ್ನು ಎದುರಿಸಲಿದ್ದಾರೆ.

ಭಾರತ 2018ರ ಆವೃತ್ತಿಯ ಟೂರ್ನಿಯಲ್ಲಿ 2 ಚಿನ್ನ ಸಹಿತ ಒಟ್ಟು 11 ಪದಕಗಳನ್ನು ಜಯಿಸಿ ಶ್ರೇಷ್ಠ ಪ್ರದರ್ಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News