ಕಾರ್ಯಕರ್ತರ ಮನೆಗೆ ಬಿಜೆಪಿ ಸ್ಟಿಕ್ಕರ್, ಧ್ವಜ ಕಟ್ಟುವ ಕಾರ್ಯಕ್ರಮ: ಸಂಸದ ನಳಿನ್ ಕಟೀಲ್ ಚಾಲನೆ

Update: 2019-02-14 18:33 GMT

ಪುತ್ತೂರು,ಫೆ.14: ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ  ಜಾತಿ ಆಧಾರದಲ್ಲಿ ಮೀಸಲಾತಿ ತೆಗೆದು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದ ಏಕೈಕ ಸರ್ಕಾರವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಗುರುವಾರ ಸಂಜೆ ಪುತ್ತೂರು ಬಿಜೆಪಿ ವತಿಯಿಂದ ಮುಂಬರುವ ಚುನಾವಣೆ ಅಂಗವಾಗಿ ತಾಲೂಕಿನ ಕಾರ್ಯಕರ್ತರ ಮನೆ ಮನೆಗಳಲ್ಲಿ ಬಿಜೆಪಿ ಪಕ್ಷದ ಸ್ಟಿಕ್ಕರ್ ಹಾಗೂ ಧ್ವಜ ಕಟ್ಟುವ ಕಾರ್ಯಕ್ರಮಕ್ಕೆ ಬನ್ನೂರು ಕರ್ಮಲದಲ್ಲಿರುವ ಬಿಜೆಪಿ ಜಿಲ್ಲಾ ಸಮಿತಿ ಪದಾಧಿಕಾರಿ ಗೋಪಾಲಕೃಷ್ಣ ಹೇರಳೆ ಅವರ ಮನೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು. 

ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು ಆರ್ಥಿಕವಾಗಿ ಹಿಂದುಳಿದ, ಅರ್ಹತೆ ಆಧಾರದಲ್ಲಿ ಮೀಸಲಾತಿಯನ್ನು ಈ ಬಾರಿಯ ಬಜೆಟ್‍ನಲ್ಲಿ ಕೇಂದ್ರ ಸರಕಾರ ಮಂಡಿಸಿದೆ. ಈ ಪೈಕಿ 10 ಶೇ. ಉದ್ಯೋಗ, 10 ಶೇ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಪರಿಣಾಮ ಮಾಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗುವ ಜತೆಗೆ ನೆಮ್ಮದಿಯ ಜೀವನ ನಡೆಸುವಂತಹ ಯೋಜನೆಯನ್ನು ತಂದಿದ್ದಾರೆ. ಪ್ರಸ್ತುತ ಇಡೀ ದೇಶದಲ್ಲಿ ಪರಿವರ್ತನೆ ವಾತಾವರಣ ಉಂಟಾಗಿದ್ದು, ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದರು.

ಈಗಾಗಲೇ ಕೇಂದ್ರ ಸರಕಾರದಿಂದ ಪುತ್ತೂರು ನಗರಕ್ಕೆ 22 ಕೋಟಿಗಳ ಅನುದಾನ ಬಂದಿದ್ದು, ರಸ್ತೆ, ಇನ್ನಿತರ ಕಾಮಗಾರಿಗಳು ಪ್ರಗತಿಯಲ್ಲಿದೆ. ಅಲ್ಲದೆ ಮಡಿಕೇರಿ-ಬೆಂಗಳೂರು ರಾಜ್ಯ ಹೆದ್ದಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ ಕೀರ್ತಿ ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ ಎಂದರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರಸಭಾ ಸದಸ್ಯರಾದ ಜೀವಂಧರ್ ಜೈನ್, ಸಂತೋಷ್ ಕುಮಾರ್ ಬೊಳುವಾರು, ಜಿಲ್ಲಾ ಸಮಿತಿ ಪದಾಧಿಕಾರಿ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು. ಸಭೆಯಲ್ಲಿ ನಗರಸಭಾ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News