ಲೇಖಕ, ಚಿಂತಕ, ಬ್ಯಾರಿ ಆಂದೋಲನದ ರೂವಾರಿ ಅಬ್ದುಲ್ ರಹೀಂ ಟೀಕೆ ನಿಧನ

Update: 2019-02-15 04:24 GMT

ಮಂಗಳೂರು, ಫೆ.15: ಖ್ಯಾತ ಉದ್ಯಮಿ, ಬ್ಯಾರಿ ಆಂದೋಲನದ ರೂವಾರಿ, ಕವಿ, ಲೇಖಕ, ಅನುವಾದಕ, ಚಿಂತಕ ಅಬ್ದುಲ್ ರಹೀಂ ಟೀಕೆ(65) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಬೆಂಗಳೂರಿನ ಉಮರ್ ಟೀಕೆ ಸಹಿತ ನಾಲ್ವರು ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಬ್ದುಲ್ ರಹೀಂ ಟೀಕೆ ವೃತ್ತಿಯಲ್ಲಿ ಉದ್ಯಮಿ. ಟೀಕೇಸ್ ಕಾರ್ಪೊರೇಟ್ ಕಾನ್ಸೆಪ್ಟ್‌ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಇವರು, ಒಬ್ಬ ಹವ್ಯಾಸಿ ಕವಿ ಮತ್ತು ಲೇಖಕ. ಸಮಾಜದ ಬಗ್ಗೆ ಅಪಾರ ಕಳಕಳಿ ಇದ್ದ ಓರ್ವ ಭಾವಜೀವಿ. ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನ ಸ್ಥಾಪಕಾಧ್ಯಕ್ಷರಾಗಿ, ಬ್ಯಾರಿ ಭಾಷಾ ಆಂದೋಲನಲ್ಲಿ ಪೂರ್ಣ ಪ್ರಮಾಣದಲ್ಲಿ ದುಡಿದ ಓರ್ವ ಕಾರ್ಯಕರ್ತರಾಗಿದ್ದರು.

ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ 1998 ನವೆಂಬರ್ 11ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಐತಿಹಾಸಿಕ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 1999 ನವೆಂಬರ್ 21ರಂದು ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂನಲ್ಲಿ ನಡೆದ 2ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಮತ್ತು 2001 ಅಕ್ಟೋಬರ್ 28ರಂದು ಉಡುಪಿಯ ಉದ್ಯಾವರದ ಹಲೀಮಾ ಸಾಬ್ಜು ಸಭಾಂಗಣದಲ್ಲಿ ನೆರವೇರಿದ 3ನೇ ಬ್ಯಾರಿ ಸಾಹಿತ್ಯ ಸಮ್ಮೇಳನಗಳನ್ನು ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಮೂಲಕ ಬ್ಯಾರಿ ಸಾಹಿತ್ಯ ಅಕಾಡಮಿ ಸ್ಥಾಪನೆಯಾಗುವಲ್ಲಿ ಇವರ ಪ್ರಯತ್ನ ಅಪಾರ.

ಇವರು ಬ್ಯಾರಿ ಭಾಷೆಗೆ ಅನುವಾದಿಸಿದ ಖ್ಯಾತ ಕವಯಿತ್ರಿ ಮಮತಾ. ಜಿ. ಸಾಗರ್ ಅವರ 'FOR YOU' (ನಿಮಗೆ...) ಎಂಬ ಕವನವು 'HIDE & SEEK' ಎಂಬ ಮಮತಾ ಸಾಗರ್ ಅವರ ಇಂಗ್ಲಿಷ್-ಕನ್ನಡ ಕವನ ಸಂಕಲನದಲ್ಲಿ ಪ್ರಕಟವಾಗಿ ಅಂತರ್‌ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದೆ. ಇವರು ಕನ್ನಡ ಮತ್ತು ಬ್ಯಾರಿ ಭಾಷೆಯಲ್ಲಿ ಬರೆದ ವೈಚಾರಿಕ ಲೇಖನ, ವಿಮರ್ಶೆ, ಕಥೆ, ಕವನಗಳು ವಾರ್ತಾಭಾರತಿ, ಉದಯವಾಣಿ, ಜನವಾಹಿನಿ, ಬ್ಯಾರಿ ವಾರ್ತೆಯಂತಹ ಕರ್ನಾಟಕದ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

‘ಮಲ್ಲಿಗೆ ಬಲ್ಲಿ’(2014) ಇವರ ಪ್ರಥಮ ಬ್ಯಾರಿ ಕವನ ಸಂಕಲನ. ಇವರ ಕವನಗಳು ಬದುಕಿನ ವಾಸ್ತವಕ್ಕೆ ಬಹಳ ಹತ್ತಿರವಾಗಿವೆ. ಓದುಗನ ಹೃದಯಕ್ಕೆ ನೇರವಾಗಿ ತಟ್ಟುತ್ತದೆ. ಜಗತ್ ಪ್ರಸಿದ್ಧ ಇಂಗ್ಲಿಷ್ ಲೇಖಕ ಪಾವ್ಲೊ ಕೊಯ್ಲೊ ಅವರ ‘ದಿ ಅಲ್ ಕೆಮಿಸ್ಟ್’ ಎಂಬ ಪ್ರಖ್ಯಾತ ಇಂಗ್ಲಿಷ್ ಕಾದಂಬರಿಯನ್ನು ಮೂಲ ಲೇಖಕರ ಅಧಿಕೃತ ಅನುಮತಿಯನ್ನು ಪಡೆದು ‘ರಸವಾದಿ’(2015) ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ತನ್ನ ತಂದೆ, ತಾಯಿಯ ಹೆಸರಿನಲ್ಲಿ ಪ್ರಾರಂಭಿಸಿದ ನೋಂದಾಯಿತ ‘ಸಲ್ಮಾ ಬಾವಾ ಫೌಂಡೇಶನ್’ ಮೂಲಕ ಇವರು ನೂರಾರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸಿದ್ದಾರೆ. ಮಂಗಳೂರಿನ ಪ್ರಮುಖ ಕ್ರೀಡಾ ಸಂಸ್ಥೆಯಾದ ‘ ಮಂಗಳೂರು ಬೈಸಿಕಲ್ ಕ್ಲಬ್’ ಇದರ ಕಾರ್ಯಕಾರಿ ಸಮಿತಿಯಲ್ಲಿ 2016ರಿಂದ ಸದಸ್ಯರಾಗಿದ್ದವರು. ನಗರದ ಪ್ರತಿಷ್ಠಿತ ‘ಕಾಸಾ ಗ್ರಾಂಡೆ’ ವಸತಿ ಸಮುಚ್ಚಯದ ಮಾಲಕರ ಸಂಘದ ಅಧ್ಯಕ್ಷರಾಗಿ 2002ರಿಂದ 2005ರ ವರೆಗೆ ಮೂರು ಅವಧಿಗೆ ಸೇವೆ ಸಲ್ಲಿಸಿದವರು.

ಅಬ್ದುಲ್ ರಹೀಂ ಟೀಕೆ ಹುಟ್ಟಿದ್ದು ಜೋಕಟ್ಟೆಯಲ್ಲಿ, ಬೆಳೆದದ್ದು ಬಜ್ಪೆಯಲ್ಲಿ. ತೋಕೂರು ಜೋಕಟ್ಟೆಯ ಪ್ರತಿಷ್ಠಿತ ಕಡೇಮನೆ ತರವಾಡಿನ ಬಾವಾ ಅಬ್ದುಲ್ ಖಾದರ್ ಮತ್ತು ಮಂಗಳೂರಿನ ಕುಂಞರಕಾನ ತರವಾಡಿನ ಸಲ್ಮಾ ಅಬ್ದುಲ್ ಖಾದರ್ ದಂಪತಿಯ ಎರಡನೇ ಮಗನಾದ ಇವರು ಪ್ರಸ್ತುತ ಮಂಗಳೂರು ನಗರದಲ್ಲಿ ವಾಸವಾಗಿದ್ದರು. ಇವರು ಈ ನೆಲದ ಭಾಷೆ ಹಾಗೂ ಸಂಸ್ಕೃತಿಯ ಅಪ್ಪಟ ಅಭಿಮಾನಿಯಾಗಿದ್ದರು. ಇವರ ಬದುಕು ಬರಹಗಳಲ್ಲಿ ಇದನ್ನು ಕಾಣಲು ಸಾಧ್ಯ.

 ಇಂದು ಸಂಜೆ 4:15ಕ್ಕೆ ಜೋಕಟ್ಟೆಯ ಈದ್ಗಾ ಮಸೀದಿಯಲ್ಲಿ ಮಯ್ಯಿತ್ ನಮಾಝ್ ಬಳಿಕ ಮೃತರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News