ಫೆ.17ರಂದು ವಿಶುಕುಮಾರ್ ಸಾಹಿತ್ಯ ಸಮ್ಮೇಳನ: ಪ್ರಶಸ್ತಿ ಪ್ರದಾನ

Update: 2019-02-15 08:56 GMT

ಮಂಗಳೂರು, ಫೆ.15: ನಾಡಿನ ಅಪ್ರತಿಮ ನಟ, ನಿರ್ದೇಶಕ, ಸಾಹಿತಿ, ಪತ್ರಕರ್ತ ವಿಶುಕುಮಾರ್ ಅವರ ಸಂಸ್ಮರಣೆ ನಡೆಸುತ್ತಿರುವ ಯುವವಾಹಿನಿ ವತಿಯಿಂದ ಫೆ.17ರಂದು ವಿಶುಕುಮಾರ್ ಸಾಹಿತ್ಯ ಸಮ್ಮೇಳನ ಹಾಗೂ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಯುವವಾಹಿನಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ನಗರದ ಪುರಭವನದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಸಮ್ಮೇಳನ ನಡೆಯಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ ವಿಶು ಕುಮಾರ್ ಸೇವೆ ಸಲ್ಲಿಸಿದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಐವರಿಗೆ ಪುರಸ್ಕಾರ ನೀಡಲಾಗುವುದು. ನಾಟಕ ರಂಗದಲ್ಲಿ ಅರವಿಂದ ಬೋಳಾರ್, ಯಕ್ಷಗಾನ ರಂಗದಲ್ಲಿ ಸೀತಾರಾಮ ಕಟೀಲು, ಸೇವಾ ರಂಗದಲ್ಲಿ ವಕೀಲರಾದ ರವಿ ಪ್ರಸನ್ನ, ಸಾಹಿತ್ಯದಲ್ಲಿ ಉಗ್ಗಪ್ಪ ಪೂಜಾರಿ ಹಾಗೂ ಪತ್ರಿಕೋದ್ಯಮದಲ್ಲಿ ನವೀನ್ ಸೂರಿಂಜೆ ಅವರಿಗೆ ಪುರಸ್ಕಾರ ನೀಡಲಾಗುವುದು.

ಉದ್ಘಾಟನೆಯ ಬಳಿಕ ಹಾಸ್ಯ ಹರಟೆ ನಡೆಯಲಿದ್ದು, ಮನುಷ್ಯನ ಬಹುಮುಖ ವ್ಯಕ್ತಿತ್ವದ ಬಗ್ಗೆ ಚರ್ಚೆಯಾಗಲಿದೆ. ಬಳಿಕ ವಿಶುಕುಮಾರ್ ಅವರ ಒಡನಾಡಿಗಳ ಜತೆ ಸಂವಾದ ನಡೆಯಲಿದೆ. ಈ ಬಾರಿ ವಿಶುಕುಮಾರ್ ಪ್ರಶಸ್ತಿಗೆ ರಂಗಭೂಮಿಯಲ್ಲಿ 35 ವರ್ಷಗಳ ಸೇವೆ ಸಲ್ಲಿಸಿರುವ ವಸಂತ ವಿ. ಅಮೀನ್ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಉದಯೋನ್ಮುಖ ಯುವ ಬರಹಗಾರರಿಗೆ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತಿದ್ದು, ದಿನೇಶ್ ಸುವರ್ಣ ರಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕ ಎಸ್.ಆರ್. ಪ್ರದೀಪ್, ಸಾಹಿತ್ಯ ಸಮ್ಮೇಳನ ಸಮಿತಿಯ ಸಂಚಾಲಕ ಶೈಲೇಶ್, ಸಾಧು ಪೂಜಾರಿ, ಶಂಕರ್ ಡಿ. ಸುವರ್ಣ, ಯಶವಂತ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


ವಿಶು ಕುಮಾರ್ ಬರೆದಿರುವ 4 ಕಾದಂಬರಿಗಳ ಮರು ಮುದ್ರಣ

 ವಿಶುಕುಮಾರ್ ಕಾದಂಬರಿ ಸೇರಿದಂತೆ ಸುಮಾರು 20ರಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ 8 ಪುಸ್ತಕಗಳನ್ನು ಯುವವಾಹಿನಿ ಸಂಗ್ರಹಿಸಿದ್ದು, ಅದರಲ್ಲಿ ಪ್ರಥಮ ಹಂತವಾಗಿ ಕರಾವಳಿ, ಮದರ್, ಈ ಪರಿಯ ಬದುಕು, ಕರ್ಮ ಎಂಬ ನಾಲ್ಕು ಕಾದಂಬರಿಗಳನ್ನು ಮರು ಮುದ್ರಣವನ್ನು ಮಾಡಲಾಗಿದೆ ಎಂದು ಜಯಂತ ನಡುಬೈಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News