ಗಂಗೊಳ್ಳಿ ಮುಹಿಯುದ್ದೀನ್ ಮಸೀದಿಯಲ್ಲಿ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ

Update: 2019-02-15 09:18 GMT

ಉಡುಪಿ, ಫೆ.15: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಇಂದು ಜುಮಾ ನಮಾಝಿನ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಜುಮಾ ನಮಾಝ್ ಮೊದಲು ಹಾಗೂ ಖುತ್ಬಾದ ನಂತರ ಅವಧಿಯಲ್ಲಿ ಖತೀಬ್ ಮೌಲಾನಾ ಅಬ್ದುಲ್ ವಹಾಬ್ ಸಾಹೇಬ್ ನದ್ವಿ ಅವರು ಪುಲ್ವಾಮ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಯೋಧರಿಗಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ದೇಶದ ರಕ್ಷಣೆಗೆ ಬೆನ್ನೆಲುಬಾಗಿ ನಿಂತಿರುವ ನಮ್ಮ ಹೆಮ್ಮೆಯ ವೀರ ಯೋಧರ ಮೇಲೆ ನಿನ್ನೆ ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು, 40ಕ್ಕೂ ಹೆಚ್ಚು ವೀರ ಯೋಧರು ಹುತಾತ್ಮರಾಗಿರುವುದು ಬೇಸರ ಹಾಗೂ ವಿಷಾದನೀಯ. ಈ ದುಷ್ಕೃತ್ಯ ಅತ್ಯಂತ ಖಂಡನೀಯ. ಗಂಗೊಳ್ಳಿಯ ಸಮಸ್ತ ಮುಸ್ಲಿಮರ ಪರವಾಗಿ ಈ ಘಟನೆಯನ್ನು ಖಂಡಿಸುತ್ತೇನೆ ಎಂದು ಮೌಲಾನ ಅಬ್ದುಲ್ ವಹಾಬ್ ಸಾಹಬ್ ನದ್ವಿ ತಿಳಿಸಿದರು.

ಅಗಲಿದ ವೀರ ಯೋಧರಿಗೆ ಚಿರಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ಅಗಲುವಿಕೆಯ ದುಃಖವನ್ನು ನಿಭಾಯಿಸುವ ಶಕ್ತಿಯನ್ನು ಅಲ್ಲಾಹನು ಅನುಗ್ರಹಿಸಲಿ. ಮುಂದೆ ಇಂತಹ ಘಟನೆಗಳು ನಡೆಯಬಾರದು ಹಾಗೂ ನಮ್ಮ ಯೋಧರನ್ನು ಮುಂದೆ ಇಂತಹ ಘೋರ ದುರ್ಘಟನೆಗಳಿಂದ ಅಲ್ಲಾಹನು ರಕ್ಷಿಸಲಿ ಎಂದು ಅವರು ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News