ಮಂಗಳೂರು: ಬೇಡಿಕೆ ಈಡೇರಿಕೆಗಾಗಿ ಆದಿವಾಸಿಗಳಿಂದ ಜಿಲ್ಲಾಧಿಕಾರಿ ಕಚೇರಿ ಚಲೋ

Update: 2019-02-15 09:53 GMT

ಮಂಗಳೂರು, ಫೆ.15: ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಕುಡಿಯ ಕಾಲನಿಯ ಜಮೀನಿನ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುವ ಆದಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿ ಇಂದು ಆದಿವಾಸಿ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಚಲೋ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಆದಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮ್ನವಯ ಸಮಿತಿಯ ರಾಜ್ಯ ಸಹ ಸಂಚಾಲಕ ಗುರುಶಾಂತ್, ಅರಣ್ಯದಲ್ಲಿ ವಾಸಿಸುವವರಿಗೆ ಹಲವು ಕಾನೂನುಗಳು ಬಂದರೂ ಭೂಮಿಯ ಹಕ್ಕು ಮಾತ್ರ ಇನ್ನೂ ದೊರಕಿಲ್ಲ ಎಂದು ಬೇಸರಿಸಿದರು.

2006ರ ಅರಣ್ಯ ಹಕ್ಕುಗಳ ಕಾಯ್ದೆ ಆದಿವಾಸಿಗಳಿಗಾಗಿಯೇ ರೂಪಿಸಲಾಗಿದೆ. ಆ ಕಾನೂನಿನ ಪ್ರಕಾರ 2006ಕ್ಕಿಂತ ಮೊದಲು ಅರಣ್ಯಗಳಲ್ಲಿ ವಾಸಿಸುತ್ತಿರುವವರನ್ನು ಬಲವಂತವಾಗಿ ಒಕ್ಕಲೆಬ್ಬಿಸಬಾರದು. ರಾಷ್ಟ್ರೀಯ ಉದ್ಯಾನವನ ಹೆಸರಿನಲ್ಲೂ ಅವರನ್ನು ಅರಣ್ಯದಿಂದ ಹೊರದಬ್ಬುವಂತಿಲ್ಲ. ಅವರು ಅಲ್ಲೇ ವಾಸ ಮಾಡುವುದಿದ್ದರೆ ಅವರು ಅವಕಾಶ ಕಲ್ಪಿಸಬೇಕು ಎಂಬುದಾಗಿ ಕಾಯ್ದೆಯಡಿ ಸ್ಪಷ್ಟಪಡಿಸಲಾಗಿದ್ದರೂ ಭೂಮಿಯ ಹಕ್ಕು ಮಾತ್ರ ಇನ್ನೂ ಆದಿವಾಸಿಗಳಿಗೆ ದೊರೆಯದಿರುವುದು ದುರದೃಷ್ಟಕರ ಎಂದರು.

ಕಾಡುತ್ಪತ್ತಿ ಸಂಗ್ರಹಕ್ಕೂ ಇದೀಗ ಆದಿವಾಸಿಗಳಿಗೆ ಗುತ್ತಿಗೆದಾರರ ಹಾವಳಿಯಿಂದ ತೊಂದರೆಯಾಗುತ್ತಿದೆ. ಆದಿವಾಸಿಗಳು ವಿದೇಶದಿಂದ ಬಂದವರಲ್ಲ. ಅವರ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಕರ್ತವ್ಯ. ಅವರ ಬೇಡಿಕೆ ಈಡೇರುವವರೆಗೆ ಹೋರಾಟ ನಡೆಯಲಿದೆ ಎಂದು ಅವರು ಹೇಳಿದರು.

ಬೆಳ್ತಂಗಡಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ ಲಾಯಿಲ ಮಾತನಾಡಿ, ಸ್ವಾತಂತ್ರ್ಯ ದೊರೆತು 72 ವರ್ಷಗಳು ಕಳೆದರೂ ಇಂದಿಗೂ ಹಲವಾರು ಆದಿವಾಸಿ ಕುಟುಂಬಗಳು ರಸ್ತೆ, ವಿದ್ಯುತ್ ಮೊದಲಾದ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ನೆರಿಯ ಗ್ರಾಮದ ಬಾಂಜಾರು ಮಲೆಕುಡಿಯ ನಿವಾಸಿಗಳ ಜಮೀನಿನ ಮೇಲೆ ರಾಜ್ಯ ಹೈಕೋರ್ಟ್‌ನಲ್ಲಿ ಕೇಸು ದಾಖಲಿಸಲಾಗಿದ್ದು, ಆದಿವಾಸಿಗಳ ಜಮೀನನ್ನು ವಶಪಡಿಸಿಕೊಂಡು ಅವರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ, ಜಿಲ್ಲಾ ಮಲೆಕುಡಿಯ ಸಂಘ, ತಾಲೂಕು ಯುವ ಮರಾಠಿ ಸೇವಾ ಸಂಘ, ತಾಲೂಕು ಮಲೆಕುಡಿಯ ಸಂಘ ಬೆಳ್ತಂಗಡಿ, ಮಲೆಕುಡಿಯ ಯುವ ವೇದಿಕೆ ಮೊದಲಾದ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಿಪಿಎಂ ಮುಖಂಡ ವಸಂತ ಆಚಾರಿ, ಬೆಳ್ತಂಗಡಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಅಧ್ಯಕ್ಷ ವಸಂತ ನಡ, ಕಾರ್ಯದರ್ಶಿ ಜಯಾನಂದ, ಕೋಶಾಧಿಕಾರಿ ನಾಗೇಶ್ ಬಾಂಜಾರು, ಲಕ್ಷ್ಮಣ ಅಲಂಗಾರು, ಎಲ್ಯಣ್ಣ ಮಲೆಕುಡಿಯ, ಸುಂದರ ಮಲೆಕುಡಿಯ, ಪೂವಪ್ಪ ಮಲೆಕುಡಿಯ, ಶೇಖರ ಲಾಯಿಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News