ಯೋಧರ ಹತ್ಯೆ: ದ.ಕ. ಜಿಲ್ಲಾ ವಿವಿಧ ಮಸೀದಿಗಳಲ್ಲಿ ಖಂಡನಾ ಖುತ್ಬಾ, ಪ್ರಾರ್ಥನೆ

Update: 2019-02-15 12:53 GMT

ಮಂಗಳೂರು, ಫೆ. 15: ಕಾಶ್ಮೀರದಲ್ಲಿ ನಡೆದಿರುವ ಯೋಧರ ಹತ್ಯೆಯನ್ನು ಖಂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದು ಪೈಶಾಚಿಕ ಕೃತ್ಯ. ಭಾರತೀಯರೆಲ್ಲರೂ ಒಟ್ಟು ಸೇರಿ ಇಂಥ ಕೃತ್ಯವನ್ನು ಎದುರಿಸುವ ಅಗತ್ಯವಿದೆ ಎಂದು ಮಸ್ಜಿದುಲ್ ಹುದಾ ತೊಕ್ಕೊಟ್ಟು ಖತೀಬ್ ಮುಹಮ್ಮದ್ ಕುಂಞಿ ಹೇಳಿದರು. 

ಅವರು ಶುಕ್ರವಾರದ ಜುಮಾ ಖುತ್ಬಾದಲ್ಲಿ ಯೋಧರ ಹತ್ಯೆಯನ್ನು ಖಂಡಿಸಿ, ನಂತನ ಪ್ರಾರ್ಥನೆ ಮಾಡಿದರು.

ಈ ಕೃತ್ಯವು ರಾಜಕೀಯ ಹಿತಾಸಕ್ತಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕಾದ ಮತ್ತು ಕೃತ್ಯದ ಹಿಂದಿರುವವರು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ತಡೆಯಬೇಕಾದ ಅಗತ್ಯ ಇದೆ. ಈ ದೇಶ ನಮ್ಮದು ಮತ್ತು ಇದರ ಬಗೆಗಿನ ಕಾಳಜಿಯೂ ನಮ್ಮಲ್ಲಿರಬೇಕು. ಅಲ್ಲಾಹನು ಯೋಧರ ಕುಟುಂಬಕ್ಕೆ ಸಾಂತ್ವನವನ್ನು ನೀಡಲಿ ಎಂದು ಹೇಳಿದರು.

ಕಚ್ಚೀ ಮೇಮನ್ ಮಸೀದಿಯಲ್ಲಿ ಜುಮಾ ಖುತ್ಬಾ ನೀಡಿದ ಮೌಲಾನ ಶೋಯೆಬ್ ಅವರು, ಅಕ್ರಮವನ್ನು ದೇವನು ನಿಷಿದ್ಧಗೊಳಿಸಿದ್ದಾನೆ. ಅದನ್ನು ತನ್ನ ದಾಸರ ಮೇಲೂ ನಿಷಿದ್ಧಗೊಳಿಸಿದ್ದಾನೆ. ಆದ್ದರಿಂದ ಯೋಧರ ಹತ್ಯೆಯು ದೇವನ ಮೇಲೆ ನಡೆಸಿದ ಅಕ್ರಮವಾಗಿದೆ. ನಾವೆಲ್ಲ ಈ ಸಂದರ್ಭದಲ್ಲಿ ಯೋಧರ ಜತೆ ನಿಂತು ದೇಶಕ್ಕೆ ಬಲ ನೀಡಬೇಕಾಗಿದೆ ಎಂದರು.

ಮಂಗಳೂರಿನ ಮಸ್ಜಿದುನ್ನೂರ್‍ನಲ್ಲಿ ಜುಮಾ ಖುತ್ಬಾ ನೀಡಿದ ಮೌಲಾನ ನಫ್ಸಲ್ ಅವರು, ಒಬ್ಬನ ಹತ್ಯೆಯು ಇಡೀ ಮಾನವ ಕೋಟಿಯ ಹತ್ಯೆಗೆ ಸಮ ಎಂದು ಕುರ್ ಆನ್ ಹೇಳುತ್ತದೆ ಎಂದು ತಿಳಿಸಿದರು.

ಬೋಳಂಗಡಿ ಹವ್ವಾ ಮಸೀದಿಯ ಖತೀಬ್ ಯಹ್ಯಾ ತಂಙಳ್ ಮದನಿ ಖುತ್ಬಾ ಪ್ರವಚನ ನೀಡುತ್ತಾ, ಇದು ಖಂಡನಾರ್ಹ ಕೃತ್ಯ. ಈ ಕೃತ್ಯದ ವಿರುದ್ಧ ಸರ್ವ ಮುಸ್ಲಿಮರು ಒಂದಾಗಿದ್ದಾರೆ ಎಂದರು.

ಕಲ್ಲೇಗ ಜುಮಾ ಮಸೀದಿ ಪುತ್ತೂರು ಇಲ್ಲಿನ ಧರ್ಮ ಗುರುಗಳಾದ ಮೌಲಾನ ಅಬೂಬಕರ್ ಜಲಾಲಿ ಖುತ್ಬಾ ನೀಡುತ್ತಾ, ಯೋಧರ ಹತ್ಯೆ ಕೃತ್ಯವನ್ನು ಹೃದಯದಿಂದಲೂ ಮಾತಿನಿಂದಲೂ ಖಂಡಿಸುತ್ತೇನೆ. ಭಾರತದ ಪ್ರತೀ ಮಸೀದಿಗಳು ಸೈನಿಕರ ಸುರಕ್ಷತೆಗಾಗಿ ಪ್ರಾರ್ಥಿಸಬೇಕು ಎಂದು ಕರೆ ಕೊಟ್ಟರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News