​ನಟ ರಮೇಶ್ ಭಟ್, ಕಮನೀಧರನ್ ಸೇರಿ 9 ಮಂದಿಗೆ ಸಾಧನಾ ರಾಜ್ಯ ಪ್ರಶಸ್ತಿ

Update: 2019-02-15 12:57 GMT

ಮಂಗಳೂರು, ಫೆ.15: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ 2018-19ನೇ ಸಾಲಿನ ಸಾಧನಾ ರಾಜ್ಯ ಪ್ರಶಸ್ತಿಗೆ ಹಿರಿಯ ಚಲನಚಿತ್ರ ನಟ ರಮೇಶ್ ಭಟ್, ಚಲನಚಿತ್ರ ಹಿರಿಯ ಪೋಷಕ ನಟಿ ಕಮನೀಧರನ್ ಸೇರಿ 9 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಮಾ. 2ರಂದು ಸಂಜೆ 4 ಗಂಟೆಗೆ ನಡೆಯಲಿರುವ ಪ್ರತಿಷ್ಠಾನದ 12ನೇ ವಸಂತೋತ್ಸವ, ಕಲಾ ಸಂಭ್ರಮ 2019 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಬೆಂಗಳೂರಿನ ವೈ.ಕೆ.ಸಂಧ್ಯಾ ಶರ್ಮಾ, ಪತ್ರಿಕೋದ್ಯಮದಲ್ಲಿ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು, ಯಕ್ಷಗಾನ ಕ್ಷೇತ್ರದಲ್ಲಿ ಕೆ.ಎಚ್. ದಾಸಪ್ಪ ರೈ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಡಾ.ಬಿ.ಎಂ.ಹೆಗ್ಡೆ, ಜಾದೂ ಕ್ಷೇತ್ರದಲ್ಲಿ ಕುದ್ರೋಳಿ ಗಣೇಶ್, ಸಮಾಜ ಸೇವೆಗೆ ಕಾಂತಾಡಿಗುತ್ತು ಹರೀಶ್ ಪೆರ್ಗಡೆ, ಸಾಧನಾ ಯುವ ಪ್ರಶಸ್ತಿಗೆ ಇಸ್ಮಾಯಿಲ್ ಮೂಡುಶೆಡ್ಡೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಫಲಕ, ಪದಕ, ಪ್ರಶಸ್ತಿ ಪತ್ರ, ಗೌರವ ಸನ್ಮಾನಗಳನ್ನು ಒಳಗೊಂಡಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅತ್ಯುತ್ತಮ ಕವನಸಂಕಲನಕ್ಕೆ ಪ್ರತಿಷ್ಠಾನದಿಂದ ಕೊಡಮಾಡುವ ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರಕ್ಕೆ ಜ್ಯೋತಿಗುರುಪ್ರಸಾದ್ ಅವರ ವರನಂದಿ ಪ್ರತಿಮೆ ಕವನಸಂಕಲನ, ಅತ್ಯುತ್ತಮ ಕಥಾಸಂಕಲನಕ್ಕೆ ಪ್ರತಿಷ್ಠಾನದಿಂದ ಕೊಡಮಾಡುವ ಕಥಾಯಜ್ಞ ರಾಷ್ಟ್ರೀಯ ಪುರಸ್ಕಾರಕ್ಕೆ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ್ ಬಣಹಟ್ಟಿ ಅವರ ಬೂದಿ ಮತ್ತು ಕೆಂಡ ಕಥಾಸಂಕಲನ ಆಯ್ಕೆಯಾಗಿದೆ. ಹಂಸಕಾವ್ಯ ಪುರಸ್ಕಾರ 10 ಸಾವಿರ ರೂ.ನಗದು, ಕಥಾಯಜ್ಞ ರಾಷ್ಟ್ರೀಯ ಪುರಸ್ಕಾರ 15 ಸಾವಿರ ರೂ.ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಗಣೇಶ್ ರಾವ್ ಉದ್ಘಾಟಿಸಲಿದ್ದಾರೆ ಎಂದವರು ವಿವರಿಸಿದರು.

ರಾಜೇಶ್ವರಿ ಮಂಜುನಾಥ್, ಲತಾ ಕೃಷ್ಣದಾಸ್, ವಿಜೇಶ್ ದೇವಾಡಿಗ, ಮಹೇಶ್ ಆರ್.ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News