ಪುಲ್ವಾಮದಲ್ಲಿ ಯೋಧರ ಸಾವಿಗೆ ಎಸ್‍ಡಿಪಿಐ ಖಂಡನೆ

Update: 2019-02-15 13:41 GMT

ಹೊಸದಿಲ್ಲಿ, ಫೆ. 15: ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸಿಆರ್‍ಪಿಎಫ್ ಯೋಧರ ಬೆಂಗಾವಲು ವಾಹನದ ಮೇಲೆ ಉಗ್ರನೊಬ್ಬ ಸ್ಫೋಟಕ ತುಂಬಿದ ವಾಹನ ಢಿಕ್ಕಿ ಹೊಡೆಸಿ ಸಿಆರ್‍ಪಿಎಫ್ ಯೋಧರ ಸಾವಿಗೆ ಕಾರಣವಾದ ದಾಳಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಹೇಳಿಕೆ ಬಿಡುಗಡೆ ಮಾಡಿದ್ದು, ಸಂತ್ರಸ್ತ ಕುಟುಂಬಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ರೀತಿಯ ಭೀಕರ ದಾಳಿ ನಡೆದಿರುವುದಕ್ಕೆ ತಮಗೆ ತೀವ್ರ ಆಘಾತ ಹಾಗೂ ನೋವು ಉಂಟಾಗಿದೆ. ಇಂತಹ ದಾಳಿ ನಡೆಯದಂತೆ ಮಾಡಲು ಭಾರತೀಯ ಸೇನೆ ತನ್ನೆಲ್ಲಾ ಶಕ್ತಿಯನ್ನು ಬಳಸಿ ಇಂತಹ ಕೃತ್ಯಗಳನ್ನು ಕೊನೆಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಣಿವೆಯಲ್ಲಿ ಇಂತಹ ಘಟನೆಗಳು ಹಲವು ವರ್ಷಗಳಿಂದಲೂ ಮರುಕಳಿಸುತ್ತಿರುವುದು ತೀವ್ರ ಕಳವಳಕಾರಿ ವಿಷಯವಾಗಿದೆ. ಪ್ರತಿ ಬಾರಿ ಇಂತಹ ಘಟನೆ ನಡೆದು ನಮ್ಮ ಭದ್ರತಾ ಸಿಬ್ಬಂದಿ ಜೀವ ಕಳೆದುಕೊಂಡಾಗ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿ, ಪ್ರತ್ಯುತ್ತರ ನೀಡಲಾಗುವುದು ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನಿರಂತರ ಕ್ಷೋಭೆಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಸರ್ಕಾರ ಯಾವುದೇ ಉಪಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಎಂ.ಕೆ.ಫೈಝಿ, ದೇಶಕ್ಕೆ ಸ್ವಾತಂತ್ರ್ಯ ದೊರೆತ ಅಂದಿನಿಂದ ಇಂದಿನವರೆಗೆ ಸೇನೆಯು ಉಗ್ರರೊಂದಿಗೆ ಇಲಿ ಮತ್ತು ಬೆಕ್ಕಿನ ಆಟವಾಡುತ್ತಿದೆ. ಕಾಶ್ಮೀರದ ಸುದೀರ್ಘ ಸಮಸ್ಯೆಗೆ ಸಂವಿಧಾನಾತ್ಮಕವಾಗಿ ಆ ರಾಜ್ಯಕ್ಕೆ ಸ್ವಾಯತ್ತತೆ ಕೊಡುವುದೇ ಏಕೈಕ ಪರಿಹಾರ ಎಂದು ಹಲವು ತಟಸ್ಥ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಯೋಜನೆ ಜಾರಿಗೆ ರಾಜಕೀಯ ಧೈರ್ಯ ಪ್ರಕಟಿಸುವ ಕಾಲ ಸನ್ನಿಹಿತವಾಗಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ಹೇಳಿರುವ ಸೇನಾ ಪ್ರತಿಕ್ರಿಯೆಯ ಜೊತೆಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಸರ್ಕಾರ ಸಂಬಂಧಪಟ್ಟ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಫೈಝಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News