ಯುದ್ಧ ಬೇಡ; ಮರೆಯದ ಪಾಠ ಕಲಿಸಿ: ಪೇಜಾವರಶ್ರೀ

Update: 2019-02-15 14:14 GMT

ಉಡುಪಿ, ಫೆ.15: ಕಾಶ್ಮೀರದ ಪುಲ್ವಾಮದಲ್ಲಿ 50ಕ್ಕೂ ಅಧಿಕ ಸೈನಿಕರು ಭಯೋತ್ಪಾದಕರ ದಾಳಿಗೆ ಸಿಲುಕಿ ಹುತಾತ್ಮರಾಗಿರುವುದು ದು:ಖಕರ ಸಂಗತಿ. ಸರಕಾರ ಈ ದಾಳಿಗೆ ಸೂಕ್ತವಾಗಿ ಸ್ಪಂಧಿಸಿ ಭಯೋತ್ಪಾದಕರಿಗೆ ಮರೆಯದ ಪಾಠ ಕಲಿಸಬೇಕು. ಆದರೆ ಅದು ಯುದ್ಧಕ್ಕೆ ಕಾರಣವಾಗಬಾರದು ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಹೇಳಿದ್ದಾರೆ.

ಪೇಜಾವರ ಮಠದಲ್ಲಿ ಶುಕ್ರವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣತಾಗ್ಯ ಮಾಡಿದವರಿಗೆ ಒಬ್ಬ ಯೋಗಿಗೆ ದೊರೆಯುವ ಫಲವೇ ದೊರೆಯುವುದು ಎಂದು ನಮ್ಮ ವೇದಪುರಾಣಗಳು ಹೇಳುತ್ತವೆ. ಹುತಾತ್ಮರಿಗೆ ದೇವರು ಸದ್ಗತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಪೇಜಾವರ ಶ್ರೀ ಹೇಳಿದರು.

ಕೇಂದ್ರ ಸರಕಾರ ನಿನ್ನೆಯ ದಾಳಿಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಆದರೆ ಅದು ಯುದ್ಧದ ರೂಪವನ್ನು ತಾಳದೇ ಸೌಮ್ಯ ರೀತಿಯಲ್ಲಿ ಪಾಠ ಕಲಿಸಬೇಕು. ಯಾವ ಕ್ರಮ ಎಂಬುದನ್ನು ಪ್ರಧಾನಿ ಅವರೇ ನಿರ್ಧರಿಸಬೇಕು ಎಂದು ಅವರು ನುಡಿದರು.

ಕೇಂದ್ರ-ರಾಜ್ಯದಿಂದ ಉತ್ತಮ ಬಜೆಟ್:  ಈ ಬಾರಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳೆರಡೂ ಉತ್ತಮ ಬಜೆಟ್‌ಗಳನ್ನು ಮಂಡಿಸಿವೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ತಾವು ಅಭಿನಂದಿಸುವುದಾಗಿ ಸ್ವಾಮೀಜಿ ತಿಳಿಸಿದರು. ಇದರಿಂದ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲು ಸಾದ್ಯವಾಗಲಿದೆ ಎಂದರು.

ಗಂಗಾ ಶುದ್ಧೀಕರಣ ಕಾರ್ಯ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇತ್ತೀಚೆಗೆ ತಾವು ಕುಂಭಮೇಳದಲ್ಲಿ ಭಾಗವಹಿಸಿದ್ದಾಗ, ಗಂಗೆ ಪರಿಶುದ್ಧತೆಯಿಂದ ಗೋಚ ರಿಸಿದಳು. ಇದಕ್ಕಾಗಿ ಸಚಿವ ನಿತಿನ್ ಗಡ್ಕರಿ ಅವರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದರು.

ರಾಮಮಂದಿರ ಸದ್ಯಕ್ಕಿಲ್ಲ:  ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ನ್ನು ಮೀರಿ ಹೋಗುವುದು ಸರಿಯಲ್ಲ ಎಂದು ಕೇಂದ್ರ ಸರಕಾರ ಭಾವಿಸಿರುವುದರಿಂದ, ಈವಿಷಯವನ್ನು ಮುಂಬರುವ ಲೋಕಸಭಾ ಚುನಾವಣೆ ಮುಗಿಯುವವರೆಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಪೇಜಾವರಶ್ರೀ ತಿಳಿಸಿದರು.

ಕೇಂದ್ರ ಸರಕಾರ ರಾಮಮಂದಿರಕ್ಕಾಗಿ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದರೆ ಅದರಿಂದ ಮುಂದೆ ಮುಖಭಂಗವಾಗಬಹುದು ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಈ ವಿಷಯವನ್ನು 3-4 ತಿಂಗಳು ಮುಂದೂಡ ಲಾಗಿದೆ. ಈ ವಿಷಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಮೀರುವುದು ಸರಿಯಲ್ಲ. ಅಲ್ಲದೇ ಚುನಾವಣೆಯಲ್ಲಿ ಈ ವಿಷಯವನ್ನು ಎತ್ತುವುದು ತಪ್ಪಾಗುತ್ತದೆ ಎಂದು ಅವರು ನುಡಿದರು.

ಕುಂಭಮೇಳದಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆದಿದೆ. ಎಲ್ಲರೂ ಚರ್ಚಿಸಿ ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಒಪ್ಪಿಗೆ ಯನ್ನು ನೀಡಿದ್ದೇನೆ. ಚುನಾವಣೆ ಮುಗಿಯಲಿ. ಮುಂದಿನ ಪ್ರದಾನಿ ಯಾರೇ ಆದರೂ ರಾಮಮಂದಿರ ನಿರ್ಮಾಣದ ನಮ್ಮ ನಿರ್ಧಾರ ಬದಲಾಗುವುದಿಲ್ಲ ಎಂದರು.

ಹೈದರಾಬಾದ್‌ನಲ್ಲಿ ಮಾಧ್ವ ತತ್ತ್ವಜ್ಞಾನ ಸಮ್ಮೇಳನ

ಇದೇ ಫೆ. 22ರಿಂದ 24ರವರೆಗೆ ಮೂರು ದಿನಗಳ ಕಾಲ ಮಾಧ್ವ ತತ್ತ್ವ ಸಮ್ಮೇಳನ ಹಾಗೂ ತಮ್ಮ 37ನೇ ಸುಧಾ ಮಂಗಲ ಮಹೋತ್ಸವ ಹೈದರಾಬಾದ್‌ನ ನೃಪತುಂಗ ವಿದ್ಯಾಲಯದಲ್ಲಿ ನಡೆಯಲಿದೆ ಎಂದು ಶ್ರೀ ವಿಶ್ವೇಶತೀರ್ಥರು ತಿಳಿಸಿದರು.

ಆಂಧ್ರ ಪ್ರದೇಶದ ರಾಜ್ಯಪಾಲರಾದ ನರಸಿಂಹನ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪಡೆದಿರುವ ಖ್ಯಾತ ವಿಜ್ಞಾನಿ ಪಲ್ಲಿ ರಾಮರಾವ್ ಅವರು ಅಧ್ಯಕ್ಷತೆ ವಹಿಸಲಿ ದ್ದಾರೆ. ಉಡುಪಿಯ ಅಷ್ಟಮಠಗಳ ಯತಿಗಳು ಸೇರಿದಂತೆ ನಾಡಿನ ಎಲ್ಲಾ ಮಾಧ್ವ ಪೀಠಾಧಿಪತಿಗಳು ಈ ಸಮ್ಮೇಳನ ಹಾಗೂ ಸುಧಾ ಮಂಗಲದಲ್ಲಿ ಭಾಗವಹಿಸಲಿದ್ದಾರೆ ಎಂದರು.

ತಾವು ಪಾಠ ಹೇಳುತ್ತಿರುವ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ 37ನೇ ಸುಧಾ ಮಂಗಲ ಇದಾಗಿದೆ. ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪ್ರತಿ ವರ್ಷ ವಿದ್ಯಾರ್ಥಿ ಗಳು ಸೇರ್ಪಡೆಗೊಳ್ಳುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದು ಪೇಜಾವರಶ್ರೀಗಳು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News