ಭಯೋತ್ಪಾದಕ ದಾಳಿಗೆ ಚೀನಾ ಖಂಡನೆ

Update: 2019-02-15 14:45 GMT

ಬೀಜಿಂಗ್, ಫೆ. 15: ಪಾಕಿಸ್ತಾನದ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಆತ್ಮಹತ್ಯಾ ಬಾಂಬರ್ ಒಬ್ಬ ಕಾಶ್ಮೀರದ ಪುಲ್ವಾಮದಲ್ಲಿ ನಡೆಸಿದ ದಾಳಿಯನ್ನು ಚೀನಾ ಶುಕ್ರವಾರ ಖಂಡಿಸಿದೆ. ಆದರೆ, ಆ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಭಾರತದ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳ ಪೈಕಿ ಒಂದಾಗಿರುವ ಗುರುವಾರ ದಾಳಿಯಲ್ಲಿ ಕನಿಷ್ಠ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.

ಪುಲ್ವಾಮ ಜಿಲ್ಲೆಯಲ್ಲಿ 300 ಕೆಜಿಗೂ ಅಧಿಕ ಪ್ರಬಲ ಸ್ಫೋಟಕವನ್ನು ಹೊಂದಿದ್ದ ವಾಹನವೊಂದು ಸಿಆರ್‌ಪಿಎಫ್ ಯೋಧರನ್ನು ಸಾಗಿಸುತ್ತಿದ್ದ ವಾಹನಗಳ ಸಾಲಿಗೆ ನುಗ್ಗಿ ಸ್ಫೋಟಗೊಂಡಾಗ ಈ ಸಾವು-ನೋವುಗಳು ಸಂಭವಿಸಿವೆ.

‘‘ಆತ್ಮಹತ್ಯಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ವರದಿಗಳನ್ನು ಚೀನಾ ಗಮನಿಸಿದೆ. ಈ ದಾಳಿಯಿಂದ ನಾವು ತೀವ್ರವಾಗಿ ಆಘಾತಗೊಂಡಿದ್ದೇವೆ. ಗಾಯಗೊಂಡ ಸೈನಿಕರು ಮತ್ತು ನೊಂದ ಕುಟುಂಬಗಳಿಗೆ ನಾವು ಸಂತಾಪ ಮತ್ತು ಸಹಾನುಭೂತಿ ವ್ಯಕ್ತಪಡಿಸುತ್ತೇವೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್ ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘‘ನಾವು ಎಲ್ಲ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತೇವೆ ಹಾಗೂ ಬಲವಾಗಿ ಖಂಡಿಸುತ್ತೇವೆ. ಭಯೋತ್ಪಾದನೆ ಬೆದರಿಕೆಯನ್ನು ಎದುರಿಸಲು ಹಾಗೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಈ ವಲಯದ ಸಂಬಂಧಪಟ್ಟ ದೇಶಗಳು ಪರಸ್ಪರ ಸಹಕರಿಸುತ್ತವೆ ಎಂದು ನಾವು ಭಾವಿಸುತ್ತೇವೆ’’ ಎಂದು ಗೆಂಗ್ ನುಡಿದರು.

►ಪರೋಕ್ಷ ನಿರಾಕರಣೆ

ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಬಗ್ಗೆ ಚೀನಾದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್, ‘‘ಮಸೂದ್‌ನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಹೇಳುವುದಾದರೆ, ಭಯೋತ್ಪಾದಕ ಸಂಘಟನೆಗಳನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸುವ ವಿಧಿವಿಧಾನಗಳ ಬಗ್ಗೆ ಭದ್ರತಾ ಮಂಡಳಿಯ 1267 ಸಮಿತಿಯು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿದೆ’’ ಎಂದರು.

‘‘ಜೈಶೆ ಮುಹಮ್ಮದ್ ಸಂಘಟನೆಯನ್ನು ಭದ್ರತಾ ಮಂಡಳಿಯ ಭಯೋತ್ಪಾದನೆ ನಿಷೇಧ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ವಿಷಯದಲ್ಲಿ ಚೀನಾವು ರಚನಾತ್ಮಕವಾಗಿ ಹಾಗೂ ಜವಾಬ್ದಾರಿಯುತವಾಗಿ ವ್ಯವಹರಿಸುವುದನ್ನು ಮುಂದುವರಿಸಲಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News