ಭಯೋತ್ಪಾದನೆಗೆ ಸಮರ್ಥನೆಯಿಲ್ಲ: ನೇಪಾಳ ಖಂಡನೆ

Update: 2019-02-15 15:02 GMT

ಕಠ್ಮಂಡು, ಫೆ. 15: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಭದ್ರತಾ ಪಡೆಗಳ ಮೇಲೆ ಜೈಶೆ ಮುಹಮ್ಮದ್ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯನ್ನು ನೇಪಾಳ ಖಂಡಿಸಿದೆ.

‘‘ಹಲವಾರು ಅಮೂಲ್ಯ ಜೀವಗಳ ನಷ್ಟಕ್ಕೆ ಕಾರಣವಾದ ಭಯೋತ್ಪಾದಕ ದಾಳಿಯನ್ನು ನೇಪಾಳ ಸರಕಾರ ಬಲವಾಗಿ ಖಂಡಿಸುತ್ತದೆ’’ ಎಂದು ನೇಪಾಳದ ವಿದೇಶ ವ್ಯವಹಾರಗಳ ಸಚಿವಾಲಯ ಗುರುವಾರ ತಡ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಭಯೋತ್ಪಾದನೆಯಂಥ ಯಾವುದೇ ರೀತಿಯ ಹೀನ ಕೃತ್ಯವನ್ನು ಸಹಿಸಲಾಗದು ಎಂದು ಅದು ಹೇಳಿದೆ.

ನೇಪಳ ಪ್ರಧಾನಿ ಖಡ್ಗ ಪ್ರಸಾದ್ ಒಲಿ ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಸಂತಾಪ ವ್ಯಕ್ತಪಡಿಸಿದದಾರೆ.

►ಫ್ರಾನ್ಸ್ ಖಂಡನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಅಟ್ಟಹಾಸವನ್ನು ಫ್ರಾನ್ಸ್ ಪ್ರಬಲವಾಗಿ ಖಂಡಿಸುತ್ತದೆ ಎಂದು ಭಾರತಕ್ಕೆ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡರ್ ಝೈಗ್ಲರ್ ಹೇಳಿದ್ದಾರೆ.

‘‘ಎ ವಿಧದ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ಈ ಹಿಂದೆಯೂ ಭಾರತದ ಪರವಾಗಿ ನಿಂತಿತ್ತು, ಮುಂದೆಯೂ ಭಾರತದ ಪರವಾಗಿ ನಿಲ್ಲುತ್ತದೆ’’ ಎಂದು ಅವರು ಹೇಳಿದ್ದಾರೆ.

►ಜರ್ಮನಿ, ಟರ್ಕಿ, ಕೆನಡ, ಝೆಕ್ ರಿಪಬ್ಲಿಕ್, ಸ್ಪೇನ್, ಇಟಲಿ ಖಂಡನೆ

ನಮ್ಮ ಆಯಕಟ್ಟಿನ ಭಾಗೀದಾರ ಭಾರತದ ಪರವಾಗಿ ನಿಲ್ಲುವುದಾಗಿ ಜರ್ಮನಿ ಹೇಳಿದೆ ಹಾಗೂ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.

‘‘ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ’’ ಎಂದು ಸ್ಪೇನ್ ವಿದೇಶ ಸಚಿವಾಲಯ ಸ್ಪ್ಯಾನಿಶ್ ಭಾಷೆಯಲ್ಲಿ ಮಾಡಿದ ಟ್ವೀಟ್ ‌ನಲ್ಲಿ ಹೇಳಿದೆ.

‘‘ಇಟಲಿ ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ ಹಾಗೂ ಸಂತ್ರಸ್ತರು ಹಾಗೂ ಭಾರತೀಯರ ಪರವಾಗಿ ನಿಲ್ಲುತ್ತದೆ’’ ಎಂಬುದಾಗಿ ಇಟಲಿ ವಿದೇಶ ವ್ಯವಹಾರಗಳ ಸಚಿವಾಲಯವು ಟ್ವೀಟ್ ಮಾಡಿದೆ.

►ಆಸ್ಟ್ರೇಲಿಯ ಖಂಡನೆ

ಪಾಕಿಸ್ತಾನದ ಭಯೋತ್ಪಾದಕರ ದಾಳಿಯನ್ನು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಖಂಡಿಸಿದ್ದಾರೆ ಹಾಗೂ ಸೈನಿಕರ ಅಗಲಿದ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

‘‘ಹೀನ ಭಯೋತ್ಪಾದಕ ದಾಳಿಯನ್ನು ಆಸ್ಟ್ರೇಲಿಯ ಖಂಡಿಸುತ್ತದೆ. ಮೃತರ ಕುಟುಂಬಗಳಿಗೆ ನಾವು ಸಾಂತ್ವನ ಹೇಳುತ್ತೇವೆ. ನಮ್ಮ ಬೆಂಬಲ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆಯೊಂದಿಗಿದೆ’’ ಎಂಬುದಾಗಿ ಮೊರಿಸನ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News