'ಉಗ್ರರ ದಾಳಿ ಬಳಿಕ ನಕ್ಕ ಪ್ರಿಯಾಂಕಾ': ಶ್ರದ್ಧಾಂಜಲಿಯ ವಿಡಿಯೊ ತಿರುಚಿ ಅಪಪ್ರಚಾರ ಮಾಡಿದ ಅಂಕುರ್ ಸಿಂಗ್

Update: 2019-02-15 17:29 GMT

"ಪತ್ರಿಕಾಗೋಷ್ಠಿಯಲ್ಲಿ ನಕ್ಕ ಪ್ರಿಯಾಂಕಾ ಗಾಂಧಿ, ಇಂಥ ರಣಹದ್ದುಗಳು".. ಇದು ಅಂಕುರ್ ಸಿಂಗ್ ಎಂಬ ಟ್ವಿಟರ್ ಬಳಕೆದಾರ, 40 ಮಂದಿ ಸಿಆರ್ ಪಿಎಫ್ ಸೈನಿಕರನ್ನು ಬಲಿ ತೆಗೆದುಕೊಂಡ ಪುಲ್ವಾಮಾ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಮಾಡಿದ ಟ್ವೀಟ್. 11 ಸೆಕೆಂಡ್‍ನ ವಿಡಿಯೊವನ್ನು ಈ ಟ್ವೀಟ್ ಜತೆಗೆ ಲಗತ್ತಿಸಲಾಗಿತ್ತು. ಇದರಲ್ಲಿ ಪ್ರಿಯಾಂಕಾ ಗಾಂಧಿಯವರು ಎದ್ದು ನಿಂತು ‘ಬಹುತ್ ಬಹುತ್ ಧನ್ಯವಾದ್’ ಎಂದು ಹೇಳುತ್ತಿರುವುದು ಕಾಣಿಸುತ್ತಿದೆ.

ವಾಸ್ತವ ಏನು?

ಅಂಕುರ್ ಸಿಂಗ್ ಪೋಸ್ಟ್ ಮಾಡಿದ ವಿಡಿಯೊ ತುಣುಕು, ಪ್ರಿಯಾಂಕಾ ಗಾಂಧಿಯವರು ಮೃತ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದ ಸುದ್ದಿಗೋಷ್ಠಿಯ ಧೀರ್ಘ ಅವಧಿಯ ವಿಡಿಯೊದ ಸಣ್ಣ ತುಣುಕು. "ನಿಮಗೆಲ್ಲರಿಗೂ ತಿಳಿದಿರುವಂತೆ, ಈ ಪತ್ರಿಕಾಗೋಷ್ಠಿಯನ್ನು ಕೆಲ ನಿರ್ದಿಷ್ಟ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಕರೆಯಲಾಗಿತ್ತು. ಆದಾಗ್ಯೂ, ನಮ್ಮ ಸೈನಿಕರು ಹುತಾತ್ಮರಾಗಲು ಕಾರಣವಾದ ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ರಾಜಕೀಯ ವಿಚಾರಗಳನ್ನು ಚರ್ಚಿಸುವುದು ಸೂಕ್ತವಲ್ಲ" ಎಂದು ಹೇಳುವ ಮೂಲಕ ಪತ್ರಿಕಾಗೋಷ್ಠಿ ಆರಂಭಿಸಿದ್ದರು.

ಮೃತ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸುವ ಸಂದರ್ಭದಲ್ಲಿ ಅವರು, "ಈ ಸಂಕಟದ ಸಮಯದಲ್ಲಿ ಇಡೀ ದೇಶ ನಿಮ್ಮೊಂದಿಗೆ ಇದೆ ಎಂದು ಅವರ ಕುಟುಂಬಗಳಿಗೆ ಹೇಳಬಯಸುತ್ತೇನೆ" ಎಂದು ಹೇಳಿದರು. ಎಲ್ಲ ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಮೂಲಕ ಈ ಚುಟುಕು ಗೋಷ್ಠಿಯನ್ನು ಸಮಾಪ್ತಿಗೊಳಿಸಿದ್ದರು. ಜತೆಗೆ ಈ ದುರಂತದ ಸಂದರ್ಭದಲ್ಲಿ ಎರಡು ನಿಮಿಷ ಮೌನ ಆಚರಿಸುವಂತೆ ಕೋರಿದ್ದರು.

ಈ ವಿಡಿಯೊವನ್ನು ಸಮಗ್ರವಾಗಿ ವೀಕ್ಷಿಸಿದಾಗ, ಪ್ರಿಯಾಂಕಾ ಯಾವ ಹಂತದಲ್ಲೂ ನಗುತ್ತಿರುವುದು ಕಾಣುವುದಿಲ್ಲ. ಆದರೆ ತಪ್ಪು ಕಲ್ಪನೆ ಮರುವಂತೆ ಮಾಡಲು ವಿಡಿಯೊ ತಿದ್ದಲಾಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಅಂಕುರ್ ಸಿಂಗ್ ಅವರನ್ನು ಟ್ವಿಟರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿದ್ದಾರೆ. ಮಿರರ್ ನೌನಲ್ಲಿ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಅವರು ಇತ್ತೀಚೆಗೆ ತಾಂತ್ರಿಕ ತಜ್ಞರಾಗಿ ಭಾಗವಹಿಸಿದ್ದರು. ಇವರ ಟ್ವಿಟರ್ ಖಾತೆಯನ್ನು ಇತ್ತೀಚೆಗೆ ಅಮಾನತುಗೊಳಿಸಿ ಬಳಿಕ ಅಮಾನತು ವಾಪಸ್ ಪಡೆಯಲಾಗಿತ್ತು.

ಪುಲ್ವಾಮಾದಲ್ಲಿ ನಡೆದ ದುರದೃಷ್ಟಕರ ಘಟನೆಯ ಹಿನ್ನೆಲೆಯಲ್ಲಿ ಪ್ರಿಯಾಂಕಾಗಾಂಧಿ ಪತ್ರಿಕಾಗೋಷ್ಠಿ ರದ್ದುಪಡಿಸಿರುವುದನ್ನು ಹಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು.

ಸಿಆರ್‍ ಪಿಎಫ್ ಯೋಧರ ಸಾವು ರಾಷ್ಟ್ರೀಯ ದುರಂತ. ಇಂಥ ಸಮಯದಲ್ಲಿ, ಸಾಮಾಜಿಕ ಜಾಲತಾಣ ಬಳಕೆದಾರರು ತಿದ್ದಿದ ವಿಡಿಯೊ ಪೋಸ್ಟ್‍ಮಾಡುವ ಮೂಲಕ ಈ ದುರಂತವನ್ನು ಕೂಡಾ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿರುವುದು ತೀರಾ ದುರದೃಷ್ಟಕರ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News