ಸಿಂಧು, ಸೈನಾ ಫೈನಲ್ ಹಣಾಹಣಿ

Update: 2019-02-15 17:53 GMT

ಗುವಾಹಟಿ, ಫೆ.14: ಸೆಮಿ ಫೈನಲ್ ಪಂದ್ಯವನ್ನು ಗೆದ್ದುಕೊಂಡಿರುವ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ 83ನೇ ಆವೃತ್ತಿಯ ಹಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಪ್ರಶಸ್ತಿಗಾಗಿ ಹೋರಾಡಲಿದ್ದಾರೆ. ಇದು ಕಳೆದ ಆವೃತ್ತಿಯ ಟೂರ್ನಿಯ ಮಹಿಳೆಯರ ಫೈನಲ್ ಪಂದ್ಯದ ಪುನರಾವರ್ತನೆಯಾಗಿದೆ. ಇಬ್ಬರು ಆಟಗಾರ್ತಿಯರು ಮತ್ತೊಮ್ಮೆ ಮುಖಾಮುಖಿಯಾಗಿ ಮತ್ತೊಂದು ಅಧ್ಯಾಯ ಬರೆಯಲು ಸಿದ್ಧರಾಗಿದ್ದಾರೆ. ಇಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸೆಮಿ ಫೈನಲ್‌ನಲ್ಲಿ ಸಿಂಧು ಅಸ್ಸಾಂನ 19ರ ಹರೆಯದ ಅಶ್ಮಿತಾ ಚಾಲಿಹಾರನ್ನು 21-10, 22-20 ಗೇಮ್‌ಗಳ ಅಂತರದಿಂದ ಮಣಿಸಿದರು. ಮತ್ತೊಂದು ಸೆಮಿ ಫೈನಲ್‌ನಲ್ಲಿ ಸೈನಾ ನಾಗ್ಪುರದ ಕ್ವಾಲಿಫೈಯರ್ ವೈಷ್ಣವಿ ಭಾಲೆ ಅವರನ್ನು 21-15, 21-14 ಗೇಮ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದರು. ಸೈನಾ ಹಾಗೂ ಸಿಂಧು 2017ರ ನಾಗ್ಪುರದಲ್ಲಿ ನಡೆದ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಹಾಗೂ ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲಿ ಸೆಣಸಾಡಿದ್ದರು. ಸೈನಾ 2006, 2007 ಹಾಗೂ 2018ರಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಸಿಂಧು 2011 ಹಾಗೂ 2013ರಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಎರಡು ಬಾರಿಯ ಮಾಜಿ ಚಾಂಪಿಯನ್ ಸೌರಭ್ ವರ್ಮಾ ಮುಂಬೈನ ಕುಶಾಲ್‌ರನ್ನು 44 ನಿಮಿಷಗಳಲ್ಲಿ 21-14, 21-17 ಅಂತರದಿಂದ ಮಣಿಸಿ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ. ಇದಕ್ಕೆ ಮೊದಲು ನಡೆದಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ಮುಂಬೈನ ನೇಹಾ ಪಂಡಿತ್‌ರನ್ನು 21-10, 21-10 ನೇರ ಗೇಮ್‌ಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದರು. 2012ರ ಚಾಂಪಿಯನ್ ಕಶ್ಯಪ್ ಬೊದ್‌ಹಿತ್ ಜೋಶಿ ಅವರನ್ನು 21-18, 21-16 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ. ಸೈನಾ ಹಾಗೂ ಕಶ್ಯಪ್ ಕಳಪೆ ಅಂಗಣದ ಹಿನ್ನೆಲೆಯಲ್ಲಿ ಆಡಲು ನಿರಾಕರಿಸಿದ್ದು, ಗುರುವಾರ ರಾತ್ರಿ ಟಿಆರ್‌ಪಿ ಒಳಾಂಗಣ ಸ್ಟೇಡಿಯಂನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಿದರು. ವಿಶ್ವದ ಮಾಜಿ ನಂ.30ನೇ ಆಟಗಾರ ಸೌರಭ್ ವರ್ಮಾ ಪುರುಷರ ಸಿಂಗಲ್ಸ್ ನಲ್ಲಿ ಬಿ.ಸಾಯಿ ಪ್ರಣೀತ್‌ರನ್ನು 21-11, 21-23 ಹಾಗೂ 21-18 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News