ಇರಾನಿ ಕಪ್: ವಿಹಾರಿ ಐತಿಹಾಸಿಕ ಶತಕ: ವಿದರ್ಭಕ್ಕೆ ಕಠಿಣ ಸವಾಲು

Update: 2019-02-15 17:56 GMT

ನಾಗ್ಪುರ,ಫೆ.15: ಟೀಮ್ ಇಂಡಿಯಾದ ಆಟಗಾರ ಹನುಮ ವಿಹಾರಿ ಇರಾನಿ ಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು. ವಿಹಾರಿ ಶತಕ(ಔಟಾಗದೆ 180), ಅಜಿಂಕ್ಯ ರಹಾನೆ(87) ಹಾಗೂ ಶ್ರೇಯಸ್ ಅಯ್ಯರ್(ಔಟಾಗದೆ 61)ಅರ್ಧಶತಕಗಳ ಕೊಡುಗೆ ನೆರವಿನಿಂದ ಶೇಷ ಭಾರತ ತಂಡ ರಣಜಿ ಚಾಂಪಿಯನ್ ವಿದರ್ಭ ತಂಡದ ಗೆಲುವಿಗೆ 280 ರನ್ ಗುರಿ ನೀಡಿದೆ.

4ನೇ ದಿನವಾದ ಶುಕ್ರವಾರ 3 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿ 2ನೇ ಇನಿಂಗ್ಸ್ ನ್ನು ಡಿಕ್ಲೇರ್ ಮಾಡಿದ ಶೇಷ ಭಾರತ ತಂಡ ವಿದರ್ಭಕ್ಕೆ ಕಠಿಣ ಗುರಿ ನೀಡಿತು. ವಿಹಾರಿ ಒಂದೇ ಪಂದ್ಯದಲ್ಲಿ ಸತತ 2 ಶತಕ ಸಿಡಿಸಿದ ಭಾರತದ ಎರಡನೇ ದಾಂಡಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಶಿಖರ್ ಧವನ್(2011-12)ಈ ಹಿಂದೆ ಈ ಸಾಧನೆ ಮಾಡಿದ್ದರು. ವಿಹಾರಿ ಇರಾನಿ ಕಪ್‌ನಲ್ಲಿ ಆಡಿದ 3ನೇ ಇನಿಂಗ್ಸ್‌ನಲ್ಲಿ ಸತತ 3ನೇ ಶತಕ ಸಿಡಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಕಳೆದ ಋತುವಿನಲ್ಲಿ ವಿದರ್ಭದ ವಿರುದ್ಧವೇ ವಿಹಾರಿ ಶತಕ ಸಿಡಿಸಿದ್ದರು. ಗೆಲ್ಲಲು ಕಠಿಣ ಸವಾಲು ಪಡೆದಿರುವ ವಿದರ್ಭ 4ನೇ ದಿನದಾಟದಂತ್ಯಕ್ಕೆ 16 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿದೆ. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ನಾಯಕ ಫೈಝ್ ಫಝಲ್(0) ವಿಕೆಟನ್ನು ಕಳೆದುಕೊಂಡಿರುವ ವಿದರ್ಭ ಕೊನೆಯ ದಿನವಾದ ಶನಿವಾರ ಗೆಲ್ಲಲು 9 ವಿಕೆಟ್ ನೆರವಿನಿಂದ ಇನ್ನೂ 243 ರನ್ ಗಳಿಸಬೇಕಾಗಿದೆ. ಸಂಜಯ್(17) ಹಾಗೂ ಅಥರ್ವ ಟೈಡ್(16) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಶೇಷ ಭಾರತ 2 ವಿಕೆಟ್ ನಷ್ಟಕ್ಕೆ 102 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿತು. ನಾಯಕ ರಹಾನೆ(87,232 ಎಸೆತ,6 ಬೌಂಡರಿ, 1 ಸಿಕ್ಸರ್)ಅವರೊಂದಿಗೆ 3ನೇ ವಿಕೆಟ್‌ಗೆ 229 ರನ್ ಜೊತೆಯಾಟ ನಡೆಸಿದ ವಿಹಾರಿ ಪಂದ್ಯದ ಚಿತ್ರಣವನ್ನು ಸಂಪೂರ್ಣ ಬದಲಿಸಿದರು.

ರಹಾನೆ ಔಟಾದಾಗ ಶ್ರೇಯಸ್ ಅಯ್ಯರ್(ಔಟಾಗದೆ 61, 52 ಎಸೆತ, 5 ಬೌಂಡರಿ, 4 ಸಿಕ್ಸರ್)ಕ್ರೀಸ್ ಆಕ್ರಮಿಸಿಕೊಂಡರು. ವಿಹಾರಿ ಅವರೊಂದಿಗೆ ಕೈಜೋಡಿಸಿದ ಅಯ್ಯರ್ ವಿದರ್ಭ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಎಡಗೈ ಲೆಗ್ ಸ್ಪಿನ್ನರ್ ಆದಿತ್ಯ ಸರ್ವಾಟೆ ಓವರ್‌ನಲ್ಲಿ ಒಂದು ಸಿಕ್ಸರ್, ಒಂದು ಬೌಂಡರಿ ಸಿಡಿಸಿದ ಅಯ್ಯರ್ ಮುಂದಿನ ಓವರ್‌ನಲ್ಲಿ ವೇಗಿ ರಜನೀಶ್ ಗುರ್ಬಾನಿ ಓವರ್‌ನಲ್ಲಿ ಇದೇ ಪ್ರದರ್ಶನ ಮುಂದುವರಿಸಿದರು.

ಎಡಗೈ ಸ್ಪಿನ್ನರ್ ಅಕ್ಷಯ್ ಕರ್ನೆವಾರ್ ಬೌಲಿಂಗ್‌ನಲ್ಲಿ 10 ರನ್ ಕಬಳಿಸಿದ ಅಯ್ಯರ್ ಕೇವಲ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬರೋಬ್ಬರಿ 300 ಎಸೆತಗಳಲ್ಲಿ 19 ಬೌಂಡರಿ, 4 ಸಿಕ್ಸರ್‌ಗಳ ಸಹಾಯದಿಂದ ಔಟಾಗದೆ 180 ರನ್ ಗಳಿಸಿದ ವಿಹಾರಿ ಆಟದ ಕೊನೆಯ ಅವಧಿಯಲ್ಲಿ ಮುಕ್ತವಾಗಿ ಬ್ಯಾಟ್ ಬೀಸಿದರು. ಇನಿಂಗ್ಸ್ ಡಿಕ್ಲೇರ್ ಮಾಡಲು ಒಂದು ಓವರ್ ಮೊದಲು ಯಶ್ ಠಾಕೂರ್ ಬೌಲಿಂಗ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು. ವಿಹಾರಿ ದ್ವಿಶತಕ ಪೂರೈಸಲು 20 ರನ್ ಅಗತ್ಯಇರುವಾಗಲೇ ನಾಯಕ ರಹಾನೆ ಇನಿಂಗ್ಸ್ ಡಿಕ್ಲೇರ್ ಮಾಡಿದರು.

ಇಂದು ಬೆಳಗ್ಗೆ 40 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಹಾರಿ ದಿನದ ಮೊದಲ ಓವರ್‌ನಲ್ಲಿ ಸರ್ವಾಟೆ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿದರು. ತಕ್ಷಣವೇ ಅರ್ಧಶತಕವನ್ನು ಪೂರೈಸಿದರು. ರಹಾನೆ ಕೂಡ ಸರ್ವಾಟೆ ಬೌಲಿಂಗ್‌ನಲ್ಲಿ ಸಿಕ್ಸರ್ ಎತ್ತಿದರು. ನಾಯಕ ಫಝಲ್ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿ ಶೇಷ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಲು ಯತ್ನಿಸಿದರು.

ರಹಾನೆ ಇನಿಂಗ್ಸ್‌ನ 50ನೇ ಓವರ್‌ನಲ್ಲಿ ಬೌಂಡರಿ ಬಾರಿಸಿ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ವಿಹಾರಿ ಸಂದರ್ಭಕ್ಕೆ ತಕ್ಕಂತೆ ಬೌಂಡರಿ ಬಾರಿಸಿದರು. ಲಂಚ್ ವಿರಾಮಕ್ಕೆ ನಾಲ್ಕು ನಿಮಿಷ ಬಾಕಿ ಇರುವಾಗ ಆಫ್ ಸ್ಪಿನ್ನರ್ ಅಕ್ಷಯ್ ವಖಾರೆ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿದ ವಿಹಾರಿ ಶತಕ ಪೂರೈಸಿದರು.

ಹೆಚ್ಚುವರಿ ಟರ್ನ್ ಹಾಗೂ ಅಸ್ಥಿರ ಬೌನ್ಸ್ ಬ್ಯಾಟಿಂಗ್‌ಗೆ ಪೂರಕವಾಗಿರಲಿಲ್ಲ. ಆದಾಗ್ಯೂ ವಿಹಾರಿ-ರಹಾನೆ ವಿದರ್ಭ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 13 ರನ್‌ನಿಂದ ಶತಕ ವಂಚಿತರಾದ ರಹಾನೆ ಎಡಗೈ ಸ್ಪಿನ್ನರ್ ಸರ್ವಾಟೆಗೆ ವಿಕೆಟ್ ಒಪ್ಪಿಸಿದರು. 87 ರನ್‌ಗೆ ಔಟಾದ ರಹಾನೆ ಕಳೆದ 38 ಪ್ರಥಮದರ್ಜೆ ಪಂದ್ಯಗಳಲ್ಲಿ ಗರಿಷ್ಠ ಸ್ಕೋರ್ ಗಳಿಸಿದರು. ರಹಾನೆ ಔಟಾದ ಬಳಿಕವೂ ತನ್ನ ಬ್ಯಾಟಿಂಗ್ ಮುಂದುವರಿಸಿದ ವಿಹಾರಿ ಟೀ ವಿರಾಮಕ್ಕೆ ಮೊದಲು 150 ರನ್ ಪೂರ್ಣಗೊಳಿಸಿದರು.

ಅಂಪೈರ್ ನಂದನ್ ತಲೆಗೆ ಅಪ್ಪಳಿಸಿದ ಕ್ರಿಕೆಟ್ ಚೆಂಡು

ನಾಗ್ಪುರ, ಫೆ.15: ಇರಾನಿ ಕಪ್‌ನಲ್ಲಿ ವಿದರ್ಭ-ಶೇಷ ಭಾರತ ಮಧ್ಯೆ ಶುಕ್ರವಾರ ನಡೆದ ಪಂದ್ಯದ ವೇಳೆ ಅಂಪೈರ್ ಸಿ.ಕೆ. ನಂದನ್ ಅವರ ತಲೆಯ ಹಿಂಭಾಗಕ್ಕೆ ಫೀಲ್ಡರ್ ಓರ್ವ ಎಸೆದ ಚೆಂಡು ಅಪ್ಪಳಿಸಿದ ಪರಿಣಾಮ ಕೆಲವು ಕ್ಷಣ ಆತಂಕ ಉಂಟಾದ ಘಟನೆ ನಡೆದಿದೆ.

ಶೇಷ ಭಾರತದ 2ನೇ ಇನಿಂಗ್ಸ್‌ನ 95ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಹನುಮ ವಿಹಾರಿ ಲಾಂಗ್‌ಆಫ್‌ನತ್ತ ಚೆಂಡನ್ನು ತಳ್ಳಿ ಒಂದು ರನ್ ಪಡೆದು ಸತತ ಪಂದ್ಯದಲ್ಲಿ ಎರಡನೇ ಶತಕ ಪೂರೈಸಿದರು. ಈ ವೇಳೆ ವಿದರ್ಭದ ಫೀಲ್ಡರ್ ಬೌಲರ್‌ನತ್ತ ಎಸೆದ ಚೆಂಡು ಅಂಪೈರ್ ತಲೆಯ ಹಿಂಭಾಗ ಜೋರಾಗಿ ತಾಗಿತು. ಚೆಂಡು ಅಪ್ಪಳಿಸಿದ ತಕ್ಷಣ ನೋವು ತಾಳಲಾರದೆ ಅಂಪೈರ್ ಮೈದಾನದಲ್ಲಿ ಕುಳಿತುಕೊಂಡರು. ವಿದರ್ಭ ನಾಯಕ ಫೈಝ್ ಫಝಲ್ ಹಾಗೂ ಇತರ ಆಟಗಾರರು ಅಂಪೈರ್‌ರತ್ತ ಧಾವಿಸಿ ಬಂದರು. ವೈದ್ಯಕೀಯ ಸಿಬ್ಬಂದಿ ಮೈದಾನದತ್ತ ಓಡಿಬಂದರು. ಫಿಸಿಯೋ ನಂದನ್‌ಗೆ ಚಿಕಿತ್ಸೆ ನೀಡಿದರು. ಚೆಂಡು ಬಡಿದ ಹೊಡೆತಕ್ಕೆ ನಂದನ್ ಧರಿಸಿದ್ದ ಸನ್‌ಗ್ಲಾಸ್ ಪುಡಿಯಾಗಿತ್ತು. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ನಂದನ್ ಬಳಿಕ ಪಂದ್ಯ ಮುಗಿಯುವ ತನಕ ತನ್ನ ಕರ್ತವ್ಯ ನಿಭಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News