ಮತ್ತೆ ಅಭ್ಯಾಸ ಆರಂಭಿಸಿದ ಪೃಥ್ವಿ

Update: 2019-02-15 18:04 GMT

ಹೊಸದಿಲ್ಲಿ, ಫೆ.15: ಭಾರತದ ಯುವ ಬ್ಯಾಟಿಂಗ್ ತಾರೆ ಪೃಥ್ವಿ ಶಾ ಮಂಡಿನೋವಿನಿಂದ ಚೇತರಿಸಿಕೊಂಡು ತರಬೇತಿ ಆರಂಭಿಸಿದ್ದಾರೆ. ಶಾ ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಆಡುವುದರಿಂದ ವಂಚಿತರಾಗಿದ್ದರು.

ಕಿರಿಯ ಪ್ರಾಯದಲ್ಲೇ ಉತ್ತಮ ಸಾಧನೆ ಮೂಲಕ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ರೊಂದಿಗೆ ಹೋಲಿಸಲ್ಪಡುತ್ತಿರುವ 19ರ ಹರೆಯದ ಶಾ ಮುಶ್ತಾಕ್ ಅಲಿ ದೇಶೀಯ ಟ್ವೆಂಟಿ-20 ಟೂರ್ನಮೆಂಟ್‌ಗೆ ಮೊದಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ನೆಟ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.

ಮುಂಬೈ ದಾಂಡಿಗ ಶಾ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಆದರೆ,ಆಸ್ಟ್ರೇಲಿಯದಲ್ಲಿ ಅಭ್ಯಾಸ ಪಂದ್ಯದಲ್ಲಿ ಆಡುತ್ತಿದ್ದಾಗ ಗಾಯಗೊಂಡಿದ್ದ ಶಾ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.

‘‘ಆಸ್ಟ್ರೇಲಿಯದ ಉತ್ತಮ ಬೌಲಿಂಗ್ ದಾಳಿ ಎದುರು ಆಡುವ ಅವಕಾಶ ತಪ್ಪಿದ್ದಕ್ಕೆ ತುಂಬಾ ಬೇಸರವಾಗುತ್ತಿದೆ. ಆದರೆ, ಕೆಲವು ನಮ್ಮ ಕೈಯ್ಯಲಿರುವುದಿಲ್ಲ. ಮುಶ್ತಾಕ್ ಅಲಿ ಟೂರ್ನಿಯಲ್ಲಿ ನನ್ನ ಲಯ ಕಂಡುಕೊಳ್ಳಲು ಎದುರು ನೋಡುತ್ತಿರುವೆ’’ ಎಂದು ಆರಂಭಿಕ ಆಟಗಾರ ಶಾ ಹೇಳಿದ್ದಾರೆ. ಶಾ ಈ ತನಕ ಕೇವಲ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ರಾಜ್‌ಕೋಟ್‌ನಲ್ಲಿ ಆಡಿದ ತನ್ನ ಮೊದಲ ಟೆಸ್ಟ್ ನಲ್ಲಿ 18ನೇ ವಯಸ್ಸಿನಲ್ಲಿ 134 ರನ್ ಗಳಿಸಿ ಭಾರತದ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು. ತೆಂಡುಲ್ಕರ್ ತನ್ನ 17ನೇ ವಯಸ್ಸಿನಲ್ಲಿ ತಾನಾಡಿದ್ದ 9ನೇ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News